ಶಾಸಕ ಕೋಳಿವಾಡಗೆ ಸಚಿವ ಸ್ಥಾನ ನೀಡಿ
ರಾಣಿಬೆನ್ನೂರು: ಶಾಸಕ ಕೆ.ಬಿ. ಕೋಳಿವಾಡರವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ತಾಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಕೃಷ್ಣಪ್ಪ ಬಾಬಣ್ಣ ವಡ್ಡರ ಪತ್ರ ಬರೆದಿದ್ದಾರೆ. 40 ವರ್ಷಗಳಿಂದ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ನ್ನು ಬಲಪಡಿಸುವುದಕ್ಕಾಗಿ, ಹಗಲಿರುಳೆನ್ನದೇ ದುಡಿದಿದ್ದಾರೆ. ಕಳೆದ ಲೋಕಸಭೆ ಹಾಗೂ ಇತ್ತೀಚೆಗೆ ನಡೆದ ವಿಧಾನಸಭೆ ಮತ್ತು ನಗರಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯಾದ್ಯಂತ ಸಂಚರಿಸಿ ಕಾಂಗ್ರೆಸ್ ಬಲಪಡಿಸಿದ ಕೀರ್ತಿ ಕೆ.ಬಿ. ಕೋಳಿವಾಡರಿಗೆ ಸಲ್ಲುತ್ತದೆ.
2013-14ನೇ ಸಾಲಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ದಿಂದ ಆಯ್ಕೆಯಾಗಿರುವ ಶಾಸಕರಲ್ಲಿ ಕೆ.ಬಿ. ಕೋಳಿವಾಡರು ಹಿರಿಯರಾಗಿದ್ದು, ಎಸ್.ಎಂ. ಕೃಷ್ಣರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ, ರಾಜ್ಯ ಗ್ರಾಮೀಣ ನೀರು ಸರಬರಾಜು ಮತ್ತು ಪಂಚಾಯಿತಿ ಅಭಿವೃದ್ಧಿ ಸಚಿವರಾಗಿದ್ದ ಕೆ.ಬಿ. ಕೋಳಿವಾಡರು ಉತ್ತರ ಕರ್ನಾಟಕದ 18 ತಾಲೂಕಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕೈಗೊಂಡಿದ್ದ ಶಾಶ್ವತ ಪರಿಣಾಮದ ಫಲವಾಗಿ 18 ತಾಲೂಕಿನ 68 ಗ್ರಾಪಂ ವ್ಯಾಪ್ತಿಯ ಹಾಗೂ ತಾಲೂಕಿನ 35 ಗ್ರಾಪಂ ವ್ಯಾಪ್ತಿಯ 103 ಗ್ರಾಮಗಳ ಜನತೆ, ಜಲನಿರ್ಮಲ ಯೋಜನೆ ಅಡಿಯಲ್ಲಿ ತುಂಗಭದ್ರಾ ನದಿ ನೀರನ್ನು ಕುಡಿಯುತ್ತಿರುವುದನ್ನು ಮರೆಯುವಂತಿಲ್ಲ.
ಇಂಥ ಪ್ರಾಮಾಣಿಕ ವ್ಯಕ್ತಿ ಈಗ ಮತ್ತೆ ರಾಣಿಬೆನ್ನೂರು ಶಾಸಕರಾಗಿದ್ದಾರೆ. ಆದ ಕಾರಣ ಕೆ.ಬಿ. ಕೋಳಿವಾಡರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರಿಗೆ ಪತ್ರ ಬರೆದಿರುವುದಾಗಿ ಮಾಜಿ ಸೈನಿಕ ಮತ್ತು ಕಾಂಗ್ರೆಸ್ ಮುಖಂಡ ಬಾಬಣ್ಣ ವಡ್ಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.