ಸ್ವಉದ್ಯೋಗದಿಂದ ಆರ್ಥಿಕ ಸುಧಾರಣೆ
ಹಾವೇರಿ: ಸುತ್ತು ನಿಧಿ ಹಣವನ್ನು ದುರುಪಯೋಗ ಮಾಡಿಕೊಳ್ಳದೇ ಗುಂಪು ಚಟುವಟಿಕೆ ಹಾಗೂ ಸ್ವ ಉದ್ಯೋಗ ಕೈಕೊಂಡು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕೆಂದು ಅಗಡಿ ಗ್ರಾಪಂ ಅಧ್ಯಕ್ಷ ಸತೀಶ ಈಳಗೇರ ಕರೆ ನೀಡಿದರು.
ಅವರು ಇತ್ತೀಚೆಗೆ ಅಗಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಮತ್ತು ತಾಲೂಕು ಜಲಾನಯನ ಅಭಿವೃದ್ಧಿ ಇಲಾಖೆ, ನವೋದಯ ಶಿಕ್ಷಣ ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ ಐಡಬ್ಲೂಎಂಪಿ ಬ್ಯಾಟ್ 2 ಅಗಡಿ ಉಪಜಲಾನಯನ ವ್ಯಾಪ್ತಿಯ ಅಗಡಿ ಮತ್ತು ಮಾಳಾಪುರ ಗ್ರಾಮ ಮಹಿಳಾ ಸ್ವ ಸಹಾಯ ಸಂಘದ ಸದ್ಯರಿಗೆ ಉದ್ಯಮ ಶೀಲತಾ ಜಾಗೃತಿ ತರಬೇತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವಯವ ಕೃಷಿಕ ನಿಜಲಿಂಗಪ್ಪ ಬಸೇಗಣ್ಣಿ ಅವರು ಮಾತನಾಡಿ, ಜಲಾನಯನ ಯೋಜನೆಯಡಿಯಲ್ಲಿ ಸ್ವ ಸಹಾಯದ ಸಂಘದ ಸದಸ್ಯರಿಗೆ ಉಳಿತಾಯ ಮಾಡುವುದರೊಂದಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂದುವರೆಯಲು ಸಂಘಟನೆ ಅವಶ್ಯಕವಾಗಿದೆ ಎಂದು ಹೇಳಿದರು.
ನೀಡ್ಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಫ್. ಅಕ್ಕಿ, ವಿ.ಎಸ್. ದಾನಪ್ಪನವರ, ಪ್ರಗತಿಪರ ರೈತ ಕೊಟ್ರಪ್ಪ ಕಡ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ತಾಪಂ ಅಧ್ಯಕ್ಷೆ ರಿಹಾನಾ ಚಾಂದ್ಶೇಖ್ ಕಾರ್ಯಕ್ರಮ ಉದ್ಘಾಟಿಸಿದರು. ಆನಂದ ಎಫ್.ಬಿ. ಸ್ವಾಗತಿಸಿದರು.
ತಿಪ್ಪೇಶ ಕನ್ನಮ್ಮನವರ ನಿರೂಪಿಸಿದರು. ಮಂಜುನಾಥ ಎಸ್.ಎ. ವಂದಿಸಿದರು. ನೀಡ್ಸ್ ಸಂಸ್ಥೆ ಹಾಗೂ ನವಚೇತನ ಫೌಂಡೇಶನ್ ಸಿಬ್ಬಂದಿ, ವಿರೂಪಾಕ್ಷ ಬಿ., ಪ್ರದೀಪ ಹಿತ್ತಲಮನಿ, ಶಂಕ್ರಯ್ಯ ಸಂದಿಮಠ ಹಾಗೂ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.