ಖಾತ್ರಿ ಉದ್ಯೋಗಕ್ಕಾಗಿ ನರಗುಂದ ತಾಪಂ ಮುಂದೆ ಧರಣಿ
ನರಗುಂದ: ರಡ್ಡೇರ-ನಾಗನೂರು ಹಾಗೂ ಸುರಕೋಡ ಗ್ರಾಮಸ್ಥರು ಗ್ರಾಪಂನವರು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಎನ್ಆರ್ಇಜಿಎ ಮೂಲಕ ಗ್ರಾಮಸ್ಥರಿಗೆ ಕೆಲಸ ನೀಡದೇ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ, ತಾಪಂ ಮುಂದೆ ಕುಟುಂಬ ಸಮೇತರಾಗಿ ಆಗಮಿಸಿ ಧರಣಿ ನಡೆಸಿದರು. ತಾಲೂಕಿನ 12 ಗ್ರಾಪಂಗಳಲ್ಲಿ ಬಹು ದಿನಗಳಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದ್ದರೂ ಮೇಲಧಿಕಾರಿಗಳು ಕ್ರಮ ಕೈಗೊಂಡಿಲ್ಲ. ರಡ್ಡೇರ-ನಾಗನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪುರುಷ ಸ್ವ-ಸಹಾಯ ಸಂಘದವರು ಗ್ರಾಪಂ ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮದಲ್ಲಿ ಸಮರ್ಪಕ ಮಳೆಯಾಗದೇ ರೈತರು ತೊಂದರೆ ಅನುಭವಿಸುತ್ತಿದ್ದು, ಕೂಲಿಕಾರರಿಗೆ ನರೇಗಾ ಮೂಲಕ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಈ ಸಾಲಿನಲ್ಲಿ 8 ದಿನಗಳ ಕೆಲಸ ನೀಡಲಾಗಿದೆ. ಇನ್ನುಳಿದ ದಿನಗಳ ಉದ್ಯೋಗ ನೀಡುವಂತೆ ಕೇಳಿದರೆ, ಗ್ರಾಪಂನವರು ಈ ವರ್ಷದ ಅನುದಾನ ಅಷ್ಟೇ ಇದೆ. ನಿಮಗೆ ಒಂದು ವಾರದವರೆಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಚಂದಪ್ಪ ಚಲವಾದಿ, ಭೀಮಪ್ಪ ನೀರಲಗಿ, ಶೇಖಪ್ಪ ಚಲವಾದಿ, ಪುಂಡಲಿಕ್ಕಪ್ಪ ದಾಸರ, ಯಮನಪ್ಪ ಚಲವಾದಿ, ದುರಗಪ್ಪ ಚಲವಾದಿ, ಕಲ್ಲಪ್ಪ ದೊಡಮನಿ, ಪಾರವ್ವ ದಳವಾಯಿ, ಮಲವ್ವ ಚಳವಾದಿ, ಗಂಗವ್ವ ಚಳವಾದಿ, ಕಸ್ತೂರೆವ್ವ ಚಲವಾದಿ, ಮಲ್ಲವ್ವ ಮಾದರ, ರೇಣುವ್ವ ಚಲವಾದಿ, ಶಿವಾನಂದ ಮಾದರ, ಜಗದೀಶ ಮಾದರ, ಮಲ್ಲಪ್ಪ ಮಾದರ, ಬಸಪ್ಪ ಮಾದರ, ಬಸಪ್ಪ ಪೂಜಾರ ಇದ್ದರು.