ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೊಬ್ಬರ ಕೃತಕ ಅಭಾವ: ಆಕ್ರೋಶ

Lingaraj Badiger
Updated On : 31 Jul 2013, 11:10 am

ರಾಣಿಬೆನ್ನೂರು: ಯೂರಿಯಾ ಮುಂತಾದ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು ಎಂದು ಆರೋಪಿಸಿ ಗೊಬ್ಬರ ಅಂಗಡಿಗಳ ಎದುರು ಪ್ರತಿಭಟಿಸಿದ ರೈತರು, ಕೃತಕ ಅಭಾವ ಸೃಷ್ಟಿಸಿ ಸಿಕ್ಕುಬಿದ್ದಿರುವ ವ್ಯಾಪಾರಸ್ಥರ ಲೈಸೆನ್ಸ್ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
15 ದಿನಗಳಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಬಿತ್ತನೆಯಾಗಿ 20ರಿಂದ 25 ದಿನಗಳ ಹಂತದಲ್ಲಿರುವ ಹತ್ತಿ, ಗೋವಿನಜೋಳ, ಜೋಳ ಬೆಳೆಗಳಿಗೆ ಗೊಬ್ಬರ ಕೊಡಲು ರೈತರು ಮುಂದಾಗಿದ್ದಾರೆ. ಸೋಮವಾರ ಮತ್ತು ಮಂಗಳವಾರ ನಗರದ ವಿವಿಧ ಗೊಬ್ಬರ ಅಂಗಡಿಗಳಲ್ಲಿ ರೈತರು ಯೂರಿಯಾ ಖರೀದಿಸಲು ಸಾಲು ನಿಂತಿದ್ದರು.
ಯೂರಿಯಾ ಗೊಬ್ಬರವನ್ನು ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಗೊಬ್ಬರ ಇಲ್ಲ ಎಂದು ಹೇಳುತ್ತಾರೆ. ಗೋದಾಮಿಗಳಲ್ಲಿ ಮುಚ್ಚಿಟ್ಟು-ಅಂಗಡಿಯ ನಾಮಫಲಕದಲ್ಲಿ ಯೂರಿಯಾ ಗೊಬ್ಬರ ಸ್ಟಾಕ್ ಇಲ್ಲವೆಂದು ಬರೆಸುವ ವ್ಯಾಪಾರಸ್ಥರು, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರದಲ್ಲಿ ಕದ್ದು ಮುಚ್ಚಿ ಮಾರಾಟ ಮಾಡುತಿದ್ದಾರೆ.
ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ತಾಲೂಕು ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಪ್ರತಿಭಟಿಸಲಾರಂಭಿಸಿದರು. ಸುದ್ದಿ ತಿಳಿದ ತಕ್ಷಣ ತಹಸೀಲ್ದಾರ್ ಶಿವಕುಮಾರ, ಡಿವೈಎಸ್ಪಿ ಜಯಪ್ರಕಾಶ ಹಾಗೂ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗನಗೌಡರಡ್ಡಿ ಸ್ಥಳಕ್ಕಾಗಮಿಸಿದ್ದರು.
ನೇತೃತ್ವ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಕಡೂರು ಮಾತನಾಡಿ, ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರುತ್ತಿರುವ ಗೊಬ್ಬರ ವ್ಯಾಪಾರಸ್ಥರ ಲೈಸೆನ್ಸ್ ರದ್ದುಪಡಿಸಲು ಆಗ್ರಹಿಸಿದರು.
ತಹಸೀಲ್ದಾರ್ ಶಿವಕುಮಾರ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗನಗೌಡರಡ್ಡಿ, ಹೆಚ್ಚಿನ ಬೆಲೆಗೆ ಯೂರಿಯಾ ಮುಂತಾದ ರಸಗೊಬ್ಬರ ಮಾರಾಟ ಮಾಡಿರುವ ಅಂಗಡಿ, ಅಕ್ರಮವಾಗಿ ಗೊಬ್ಬರ ಮತ್ತು ಯೂರಿಯಾವನ್ನು ಸಂಗ್ರಹಿಸಿದ್ದ ಗೋದಾಮುಗಳನ್ನು ಪರಿಶಿಲಿಸಿ, 480 ಚೀಲ ಯೂರಿಯಾ ಗೊಬ್ಬರ ವಶಪಡಿಸಿಕೊಂಡರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದರಿಂದ ರೈತರು ಶಾಂತರಾದರು.
ತಾಲೂಕು ರೈತ ಸಂಘದ ಮುಖಂಡರಾದ ದಿಳ್ಳೆಪ್ಪ ಕಂಬಳಿ, ರಮೇಶಗೌಡ ಕರಬಸಳ್ಳವರ, ಮಲ್ಲಿಕಾರ್ಜುನ ಅಣ್ಣಪ್ಪಳವರ, ಚಂದ್ರಗೌಡ ಕರೆಗೌಡ್ರ, ಶಿವಪ್ಪ ಕುಪ್ಪೆಲೂರು, ಉಜ್ಜಪ್ಪ ಮರಿನಾಗಮ್ಮನವರ, ಚನ್ನವೀರಪ್ಪ ಹೋನ್ನಚಿಕ್ಕಣ್ಣನವರ, ಜೆಟ್ಟೆಪ್ಪ ಹುಲಿಹಳ್ಳಿ, ಗದ್ದಿಗೆಪ್ಪ ಕರಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement