ಸಂಶೋಧನೆ ಅಭ್ಯುದಯಕ್ಕೆ ಪೂರಕ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 30
ಸಂಶೋಧನೆಗಳು ಮಾನವ ಪ್ರಗತಿಗೆ ಅಭ್ಯುದಯಕ್ಕೆ ಪೂರ್ವಕವಾಗಿರಲಿ. ವಿಜ್ಞಾನ- ತಂತ್ರಜ್ಞಾನದ ಶಕ್ತಿ ಧಾರ್ಮಿಕ ಹಿನ್ನೆಲೆಯಲ್ಲಿ ಸದ್ಬಳಕೆಯಾಗಲಿ. ಮನುಷ್ಯ ಅಧುನಿಕತೆಯ ಬೆನ್ನ ಹತ್ತಿ ಸಮಾಧಾನ ಕಳೆದುಕೊಂಡಿದ್ದಾನೆ. ಸಂಸ್ಕೃತಿ ಹತ್ತು ಹಲವು ಮಜಲುಗಳನ್ನು ಅರಿತರೆ ಸನ್ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಆಭಿಪ್ರಾಯ ಪಟ್ಟರು.
ಪಟ್ಟಣದ ಶ್ರೀ ರಂಭಾಪುರಿ ಪದವಿ ಕಾಲೇಜಿನ ಕಂಪ್ಯೂಟರ್ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ರಂಭಾಪುರಿ ಪೀಠ ಧಾರ್ಮಿಕ ಜಾಗೃತಿ ಜತೆಗೆ ಶೈಕ್ಷಣಿಕ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಕಾಲೇಜು ಪ್ರಾರಂಭವಾಗಿ 25 ವರ್ಷಗಳು ಸಂದಿದ್ದು, ರಜತಮಹೋತ್ಸವ ಆಚರಿಸುವ ಯೋಜನೆ ರೂಪಿಸಲಾಗಿದೆ. ಬೃಹತ್ ಸ್ಮರಣ ಸಂಚಿಕೆ ಹೊರತರುವ ಯೋಜನೆ ಇದ್ದು, ಇದು ಆಕರ ಗ್ರಂಥ ರೂಪದಲ್ಲಿ ಇರಲಿದೆ ಎಂದು ಹೇಳಿದರು.
ಮುಂದಿನ ಜನವರಿಯಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಶ್ರೀ ರಂಭಾಪುರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ವಡಬುಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿ ನಡೆಯಲಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಶ್ರೀಮದ್ ವೀರಶೈವ ಸದ್ಬೋಧನ ಸಂಸ್ಥೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯು ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ರಂಭಾಪುರಿ ಪದವಿ-ಪದವಿಪೂರ್ವ ಕಾಲೇಜಿನ ಕಿರು ಪರಿಚಯ ಪತ್ರಿಕೆಯನ್ನು ಬಂಕಾಪುರ ಅರಳೆಲೆ ಹಿರೇಮಠದ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ ಮಾತನಾಡಿ, ಕಾಲೇಜಿನ ಪ್ರಗತಿಗೆ ಅಧ್ಯಾಪಕ ಸಮೂಹ ನಿರಂತರ ಪ್ರಯತ್ನಿಸಬೇಕು. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದರು.
ರಂಭಾಪುರಿ ಕಾಲೇಜಿನ ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ ಶೈಕ್ಷಣಿಕ ಪ್ರಗತಿ ವಿವರಿಸಿದರು. ಪ್ರಾಚಾರ್ಯ ಪ್ರೊ ಸಿ.ಎಚ್. ತವರಗುಂದಿ ಸ್ವಾಗತಿಸಿದರು. ಪ್ರೊ ಎಸ್.ವಿ. ಕುಲಕರ್ಣಿ ವಂದಿಸಿದರು. ಪ್ರೊ ಎಸ್.ವಿ. ಬಳೆಗಾರ ನಿರೂಪಿಸಿದರು.