ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಯಕ ದಾಸೋಹದಿಂದ ತಾರತಮ್ಯ ನಿವಾರಣೆ

Mainashree
Updated On : 3 Jun 2013, 11:00 am

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 2
ಕಾಯಕ ದಾಸೋಹ ಬಸವಾದಿ ಶರಣರ ಕಲ್ಪನೆಯಾಗಿತ್ತು. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಲ್ಲಿ ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಭಾನುವಾರ ಶ್ರೀಕ್ಷೇತ್ರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಾಳಿಂಗರಾಯ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ದಾಸೋಹ ಭವನ ಶಂಕುಸ್ಥಾಪನೆ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಮಹಾನ್ ಕಲ್ಪನೆ ಜಾರಿಗೆ ಬರಬೇಕಾದರೆ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯಕವಾಗಿದೆ. ಕಾಯಕದ ಮೂಲಕ ಉತ್ಪಾದಿಸುವದಷ್ಟೇ ಮುಖ್ಯವಲ್ಲ. ಉತ್ಪಾದಿಸಿದ್ದನ್ನು ಎಲ್ಲರಿಗೂ ಸಮನಾಗಿ ಹಂಚುವ ಕೆಲಸವೂ ಆಗಬೇಕಾಗಿರುವುದು ಅಷ್ಟೇ ಅವಶ್ಯಕವಾಗಿದೆ ಎಂದರು.
ಸಮಾಜದಲ್ಲಿ ದುಡಿಯುವ ಹಾಗೂ ದುಡಿಯದೆ ಇರುವ ಎರಡು ವರ್ಗಗಳನ್ನು ಬಸವಾದಿ ಶರಣರು ಗುರುತಿಸಿದ್ದರು. ಇಂತಹ ವ್ಯವಸ್ಥೆಯಿಂದ ಸಮಾಜದಲ್ಲಿ ತಾರತಮ್ಯ ಹೆಚ್ಚಾಗಿ ಕಂಡು ಬರುತ್ತದೆ. ಮಾತ್ರವಲ್ಲದೇ ಶೋಷಣೆಗೂ ಕಾರಣವಾಗುತ್ತಿದೆ ಎಂದ ಸಿಎಂ, ಸರ್ವರಿಗೂ ಸಮಪಾಲು-ಸಮಬಾಳು ಬರಬೇಕಾದರೆ ಬಸವಾದಿ ಶರಣರ ಕಾಯಕ ತತ್ವ ಹಾಗೂ ಕನಕದಾಸರ ಕೀರ್ತಿನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಬದುಕು ಸಾಗಿಸಬೇಕೆಂದರು.
ಪ್ರಾಮಾಣಿಕ ಪ್ರಯತ್ನ: ಜನತೆ ಬದಲಾವಣೆ ಬಯಸಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಆಡಳಿತಕ್ಕೆ ತಂದಿದ್ದಾರೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತ ನೀಡಲಿದೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಜನತೆ ಬೇಸತ್ತಿದ್ದರು ಎಂದು ದೂರಿದರು.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದಲ್ಲಿ ಬರ ಆವರಿಸಿತ್ತು. ದುಡಿಯುವ ಕೈಗಳಿಗೆ ಉದ್ಯೋಗವಿರಲ್ಲಿಲ್ಲ. ಕುಡಿವ ನೀರಿನ ಹಾಹಾಕಾರ, ಜಾನುವಾರುಗಳಿಗೆ ಮೇವಿನ ಕೊರತೆ, ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಗೋಲಿಬಾರ್ ನಡೆಸಿದ್ದು ನಿಜಕ್ಕೂ ವಿಷಾದನೀಯ ಸಂಗತಿ ಎಂದರು.
ಎಂದಿಗೂ ಪ್ರಸ್ತುತ: ಬಸವಾದಿ ಶರಣರ ಕಾಯಕ ತತ್ವ ಹಾಗೂ ಕನಕದಾಸರ ಕೀರ್ತನಗಳು ಎಂದಿಗೂ ಪ್ರಸ್ತುತ ಎಂದ ಸಿಎಂ ಸಿದ್ದರಾಮಯ್ಯ, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಮಾತ್ರವಲ್ಲದೇ ಆ ಮೂಲಕ ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಠ-ಮಾನ್ಯಗಳು ಅಕ್ಷರ ದಾಸೋಹದ ಜತೆಗೆ ಅನ್ನದಾಸೋಹವನ್ನು ನಿಯಮಿತವಾಗಿ ನಡೆಸಿಕೊಂಡು ಹೋರಟಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕನಕಗುರುಪೀಠ ಸ್ಥಾಪನೆಯ ಹಿಂದಿನ ಉದ್ದೇಶವೂ ಇದೆ ಆಗಿದೆ ಎಂದರು.
ಸಾಮ್ಯತೆ ಅವಶ್ಯ: ಜಾತಿ-ಜಾತಿಗಳ ಮಧ್ಯೆ ಸಾಮ್ಯತೆ ಬಂದಾಗ ಮಾತ್ರ ಜಾತಿ ವ್ಯವಸ್ಥೆ ಸಂಪೂರ್ಣ ಹೋಗಲಾಡಿಸಲು ಸಾಧ್ಯ. ಶಿಕ್ಷಣ ಹಾಗೂ ಆರ್ಥಿಕ ಶಕ್ತಿ ಎಲ್ಲ ವರ್ಗದ ಜನರಲ್ಲಿಯೂ ಏಕಕಾಲಕ್ಕೆ ಬಂದಾಗ ಮಾತ್ರ ಈ ವ್ಯವಸ್ಥೆ ಊಹಿಸಿಕೊಳ್ಳಬಹುದು ಎಂದರು.
ಕನಕಗುರು ಪೀಠದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಪೀಠ ಕೇವಲ ಕುರುಬ ಸಮಾಜ ಬಾಂಧವರಿಗಾಗಿ ಮಾತ್ರ ಸ್ಥಾಪಿಸಿದ್ದಲ್ಲಿ ಇಲ್ಲಿ ಎಲ್ಲ ವರ್ಗದ ಜನರಿಗೂ ಅನುಕೂಲ ದೊರಕುವಂತಾಗಬೇಕು ಎಂದೂ ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement