ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದಕ್ಷ, ಪ್ರಾಮಾಣಿಕರಿಂದ ರಾಜ್ಯ ಸುಭಿಕ್ಷ

Mainashree
Updated On : 3 Jun 2013, 11:00 am

ಬ್ಯಾಡಗಿ: ರಾಜಕೀಯ ವ್ಯವಸ್ಥೆ ಕಲುಷಿತಗೊಂಡ ಪರಿಣಾಮ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಜನರಿಗೆ ವಿಶ್ವಾಸವಿಲ್ಲದಂತಾಗಿದೆ. ದಕ್ಷ ಹಾಗೂ ಪ್ರಾಮಾಣಿಕರು ರಾಜ್ಯ ಮುನ್ನಡೆಸಿದಾಗ ಮಾತ್ರ ಸುಭಿಕ್ಷ ರಾಜ್ಯ ನಿರ್ಮಾಣ ಸಾಧ್ಯ ಎಂದು ಹರಿಹರ ಪಂಚಮಸಾಲಿಪೀಠದ ಜಗದ್ಗುರು ಸಿದ್ಧಲಿಂಗ ಶ್ರೀಗಳು ಹೇಳಿದರು.
ಭಾನುವಾರ ತಾಲೂಕಿನ ಕಾಗಿನೆಲೆಯಲ್ಲಿ ಕನಕಗುರು ಪೀಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಾಳಿಂಗರಾಯ ವಿದ್ಯಾರ್ಥಿ ನಿಲಯ ಹಾಗೂ ದಾಸೋಹ ಭವನ ಶಂಕುಸ್ಥಾಪನೆ ಮತ್ತು ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಧಾನಸೌಧದಲ್ಲಿ ಶಾಸಕರು, ಸಚಿವರು ಎಂಬ ಪದಗಳ ಜತೆಗೆ ಇತ್ತೀಚೆಗೆ ಕಳಂಕಿತರು, ಸ್ವಜನಪಕ್ಷ ಪಾತಿಗಳು, ಭ್ರಷ್ಟಾಚಾರಿಗಳು ಎನ್ನುವ ಪದಗಳು ಉದ್ಭವಿಸಿವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸಂಶಯಾಸ್ಪದವಾಗಿ ನೋಡುವಂತಾಗಿದೆ ಎಂದರು.
ಪುಕ್ಕಟೆಯಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ವರ್ಗ, ವರ್ಣ ಪದ್ಧತಿಯನ್ನು ಮೀರಿ ಪೌರೋಹಿತ್ಯಶಾಹಿ ಪ್ರಭಾವ ಹಾಗೂ ರಾಜಪ್ರಭುತ್ವದ ಆಳ್ವಿಕೆ ಬಳಿಕ ಹೋರಾಟದ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿಸಲಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ಯಶಸ್ವಿಗೊಳಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು.
ಕಡಿಮೆ ತಪ್ಪು ಮಾಡುವ ನ್ಯಾಯಾಂಗ ವ್ಯವಸ್ಥೆ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಅಧಿಕಾರಿ ವರ್ಗ, ಜನಪರ ಯೋಜನೆ ನೀಡುವ ಶಾಸಕಾಂಗ ವ್ಯವಸ್ಥೆ ದೇಶದಲ್ಲಿ ಎಲ್ಲಿಯವರೆಗೆ ಜೀವಂತವಾಗಿತ್ತದೆಯೋ ಅಲ್ಲಿಯವರೆಗೆ ದೇಶ ಮತ್ತು ನಾಗರಿಕರು ಸುಭಿಕ್ಷವಾಗಿರಲು ಸಾಧ್ಯವೆಂದರು.
ಗಟ್ಟಿತನದಿಂದ ಕೂಡಿರುವ ಹಾಲುಮತ ಸಮಾಜಕ್ಕೆ ಸೇರಿದ ಸಿದ್ದರಾಮಯ್ಯ ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳನ್ನು ಈಡೇರಿಸಬೇಕಾಗಿದೆ. ಸತತ ಮೂರು ವರ್ಷಗಳಿಂದ ಈ ಭಾಗದಲ್ಲಿ ಬರಗಾಲ ಬಿದ್ದಿದ್ದು, ಹೀಗಾಗಿ ಕುಡಿಯುವ ನೀರಿಗೂ ಪರಿತಪಿಸಬೇಕಾಗಿದೆ. ನೀರಾವರಿ, ಇನ್ನಿತರ ಸೌಲಭ್ಯಗಳನ್ನು ರೈತರಿಗೆ ಒದಗಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement