ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪತ್ರಕರ್ತರೊಂದಿಗೆ ಪೊಲೀಸರ ಅನುಚಿತ ವರ್ತನೆ: ಪ್ರತಿಭಟನೆ

Mainashree
Updated On : 3 Jun 2013, 11:00 am

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 2
ಬ್ಯಾಡಗಿ ತಾಲೂಕಿನ ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದ ವರದಿಗಾಗಿ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಆರಕ್ಷಕ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದನ್ನು ಖಂಡಿಸಿ, ವರದಿಗಾರರು ಕಾರ್ಯಕ್ರಮದ ಸ್ಥಳದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದಲೇ ನೀಡಲಾಗಿದ್ದ ಪಾಸ್‌ಗಳೊಂದಿಗೆ ವರದಿಗಾರರು, ಕಾರ್ಯಕ್ರಮದ ಸ್ಥಳಕ್ಕೆ ತೆರಳಿದ್ದರು. ಆದರೆ, ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಮುಖ್ಯ ದ್ವಾರದಲ್ಲಿ ನಿಂತಿದ್ದ ಪಿಎಸ್‌ಐ ಸೇರಿದಂತೆ ನಾಲ್ಕಾರು ಪೇದೆಗಳು ಮಾಧ್ಯಮದವರನ್ನು ಹಿಡಿದು ಎಳೆದಾಡಿದರಲ್ಲದೇ ಒಳಗೆ ಪ್ರವೇಶ ನೀಡುವುದಿಲ್ಲ ಎಂದು ದುಂಡಾವರ್ತನೆ ತೋರಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲೇ ಉಪಸ್ಥಿತರಿದ್ದ ಅನೇಕ ಪತ್ರಿಕೆಗಳ ವರದಿಗಾರರ ಆರಕ್ಷಕ ಸಿಬ್ಬಂದಿಯನ್ನು ಸಮಾಧಾನಪಡಿಸಲು ಯತ್ನಿಸಿದರೂ ಪಿಎಸ್‌ಐ ಸೇರಿದಂತೆ ಮತ್ತಿತರ ಸಿಬ್ಬಂದಿ ಮಾಧ್ಯಮದವರ ಮೇಲೆ ಏರಿ ಹೋಗಲು ಯತ್ನಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಇಷ್ಟೆಲ್ಲ ರಾದ್ಧಾಂತ ಸಂಭವಿಸಿದರೂ ವರದಿಗಾರರು ಸಂಯಮದಿಂದ ವರ್ತಿಸಿದರಲ್ಲದೇ ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಮುಂದಾದಾಗ, ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಆರಕ್ಷಕ ಸಿಬ್ಬಂದಿ ಮತ್ತೆ ಪತ್ರಕರ್ತರನ್ನು ತಡೆ ಹಿಡಿದು ಸಾಗ ಹಾಕಲು ಯತ್ನಿಸಿದ್ದು ಮಾಧ್ಯಮದವರನ್ನು ಕೆರಳುವಂತೆ ಮಾಡಿತು.
ಎಸ್ಪಿ ಪ್ರಯತ್ನ ವಿಫಲ: ನಂತರ, ಆರಕ್ಷಕರ ದುಂಡಾವರ್ತನೆ ಖಂಡಿಸಿದ ಪತ್ರಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಆವರಣದಲ್ಲೇ ಪ್ರತಿಭಟನೆ ಆರಂಭಿಸಿದರು. ಸುದ್ದಿ ತಿಳಿಯುತ್ತಿದಂತೆಯೇ, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ಸಿಂಗ್ ರಾಥೋರ್ ಆಗಮಿಸಿ ಸಿಬ್ಬಂದಿಯಿಂದ ಆಗಿರುವ ತಪ್ಪಿಗೆ ವಿಷಾದ ವ್ಯಕ್ತಪಡಿಸಿ ಮಾಧ್ಯಮದವರನ್ನು ಕಾರ್ಯಕ್ರಮ ಸ್ಥಳಕ್ಕೆ ಕರೆದ್ಯೊಯಲು ಪ್ರಯತ್ನಿಸಿದರೂ, ಅದು ಸಫಲವಾಗಲಿಲ್ಲ.
ಸಿಎಂ ಸಿದ್ದರಾಮಯ್ಯ ಖುದ್ದಾಗಿ ಸ್ಥಳಕ್ಕೆ ಬಂದು ಅಧಿಕಾರಿಗಳಿಗೆ ಬುದ್ಧಿ ಹೇಳಿದ ಬಳಿಕ ತಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಮಾಧ್ಯಮ ಪ್ರತಿನಿಧಿಗಳು ಪಟ್ಟು ಹಿಡಿದಿದ್ದರಿಂದ ಕೆಲಕಾಲ ಈ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಶಾಸಕರಿಂದ ಕ್ಷಮೆಯಾಚನೆ: ನಂತರ ಸ್ಥಳಕ್ಕೆ ಆಗಮಿಸಿದ ಶಾಸಕ ಬಸವರಾಜ ಶಿವಣ್ಣನವರ, ಆರಕ್ಷಕ ಸಿಬ್ಬಂದಿಯಿಂದ ನಡೆದ ಅಚಾತುರ್ಯಕ್ಕೆ ಕ್ಷಮೆಯಾಚಿಸಿದರಲ್ಲದೆ, ಮತ್ತೊಮ್ಮೆ ಈ ರೀತಿಯ ಪ್ರಮಾದಗಳು ಪೊಲೀಸ್‌ರಿಂದ ನಡೆಯದಂತೆ ನಿಗಾ ವಹಿಸುವಂತೆ ಎಸ್ಪಿ ರಾಥೋರ್ ಅವರಿಗೆ ಸೂಚಿಸಿ ಮಾಧ್ಯಮದವರ ಮನವೊಲಿಸುವಲ್ಲಿ ಯಶಸ್ವಿಯಾದರು.
ಪ್ರಾಧಿಕಾರದಿಂದಲೂ: ಸಿಎಂ ಪಾಲ್ಗೊಳ್ಳಲಿರುವ ಕಾರ್ಯಕ್ರಮಕ್ಕೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡುವಲ್ಲಿ ಪ್ರಾಧಿಕಾರವೂ ಸಾಕಷ್ಟು ಎಡವಿದ್ದು ಕಂಡು ಬಂದಿತು. ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಸಿಎಂ ಅವರನ್ನು ಸನ್ಮಾನಿಸುವ ಧಾವಂತದಲ್ಲಿ ನೂರಾರು ಸಂಖ್ಯೆಯಲ್ಲಿ ವೇದಿಕೆ ಮೇಲೇರಿದ್ದರಿಂದ ತೀರಾ ಗೊಂದಲದ ಪರಿಸ್ಥಿತಿ ಉಂಟಾಯಿತು. ವೇದಿಕೆಯಲ್ಲಿ ಸಾಕಷ್ಟು ಆರಕ್ಷಕ ಸಿಬ್ಬಂದಿ ನಿಂತುಕೊಂಡಿದ್ದರಾದರೂ ಕೆಲಹೊತ್ತು ಏನು ಮಾಡಬೇಕೆನ್ನುವುದು ತೋಚದ ಮೂಕರಾಗಿ ನಿಂತುಕೊಂಡಿದ್ದರು. ಈ ಗೊಂದಲದಲ್ಲಿ ಸ್ವಾಮೀಜಿಯೊಬ್ಬರೂ ತಳ್ಳಾಟದಲ್ಲಿ ಸಿಲುಕಿಕೊಂಡು ಯಾತನೆ ಅನುಭವಿಸುವಂತಾಯಿತು. ಒಟ್ಟಾರೆ, ಕಾರ್ಯಕ್ರಮದುದ್ದಕ್ಕೂ ಆರಕ್ಷಕ ಸಿಬ್ಬಂದಿ ಹಾಗೂ ಪ್ರಾಧಿಕಾರದವರಿಂದ ನಡೆದ ಪ್ರಮಾಣದ ಕಣ್ಣಿಗೆ ರಾಚಿದಂತೂ ಸುಳ್ಳಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement