ಶೋಷಿತರನ್ನು ಮುಖ್ಯವಾಹಿನಿಗೆ ತನ್ನಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜೂ. 2
ಶೋಷಿತ ವರ್ಗದ ಜನರಿಗೆ ಸಾಮಾಜಿಕ ನ್ಯಾಯಕೊಡಿಸುವ ಮೂಲಕ ಮುಖ್ಯವಾಹಿನಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಸಲಹೆ ನೀಡಿದರು.
ಭಾನುವಾರ ತಾಲೂಕಿನ ಕಾಗಿನೆಲೆಯಲ್ಲಿ ಕನಕಗುರು ಪೀಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಾಳಿಂಗರಾಯ ವಿದ್ಯಾರ್ಥಿನಿಲಯ ಹಾಗೂ ದಾಸೋಹ ಭವನದ ಶಂಕುಸ್ಥಾಪನೆ ಮತ್ತು ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶೋಷಿತರ ಅಭಿವೃದ್ಧಿಗೆ ಶರಣರು, ದಾರ್ಶಿನಿಕರು ಹೋರಾಟ ನಡೆಸಿದ್ದಾರೆ. ಅವರಲ್ಲಿ ಬಸವೇಶ್ವರ ಹಾಗೂ ಕನಕದಾಸರು ಪ್ರಮುಖವಾಗಿದ್ದು ಅವರ ತತ್ವಾದರ್ಶಗಳ ಅಡಿಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಚಿತವಾದ ಸಂವಿಧಾನವೂ ಕೂಡ ನಡೆಯಬೇಕಾಗಿದೆ ಎಂದರು.
ಜನತಾ ಪರಿವಾರದ ನೇತಾರರಾಗಿದ್ದ ಸಿದ್ದರಾಮಯ್ಯ ಅಹಿಂದ್ ಸಂಘಟನೆ ಹುಟ್ಟುಹಾಕುವ ಮೂಲಕ ರಾಜ್ಯದಲ್ಲಿ ಶೋಷಿತ ವರ್ಗದ ನಾಯಕರಾಗಿ ಹೊರಹೊಮ್ಮಿದ್ದು, ಬಳಿಕ ಅವರನ್ನು ಕರೆತಂದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯಾಗಿ ಮಾಡಿದೆ ಎಂದರು.
ಸೋನಿಯಾಗೆ ಅಭಿನಂದನೆ: ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಯಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಎಐಸಿಸಿ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ ಶಾಸಕರಿಗೂ ಸಮಾಜದ ಪರವಾಗಿ ಶ್ರೀಗಳು ಅಭಿನಂದನೆ ಸಲ್ಲಿಸಿದರು.
ಕಪ್ಪುವರ್ಣ ನ್ಯಾಯದ ಸಂಕೇತ: ಕಂಬಳಿಯಲ್ಲಿರುವ ಕಪ್ಪು ವರ್ಣ ನ್ಯಾಯದ ಸಂಕೇತವಾಗಿದೆ. ಹೀಗಾಗಿ ಇಂದಿಗೂ ನ್ಯಾಯದೇವತೆಯ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಲಾಗಿದ್ದು ನ್ಯಾಯಾಧೀಶರಿಂದ ಹಿಡಿದು ವಕೀಲರವರೆಗೂ ಕಪ್ಪು ವರ್ಣದ ಕೋರ್ಟ್‌ಗಳನ್ನು ಧರಿಸಲಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ ಎಂದರು.
ವಿಧಾನಸೌಧದಲ್ಲಿ ಕಂಬಳಿ: ಕುರುಬರು ಕೂಡಿ ಕೆಟ್ಟರು ಎನ್ನುವ ನಾಣ್ಣುಡಿ ಇದೆ. ಆದರೆ, ಇತ್ತೀಚೆಗೆ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮಾಜದ ಬಹಳಷ್ಟು ಶಾಸಕರು ಆಯ್ಕೆಯಾಗುವ ಮೂಲಕ ನಾಣ್ಣುಡಿಯನ್ನು ಸುಳ್ಳಾಗಿಸಿದ್ದಾರೆ ಎಂದ ಶ್ರೀಗಳು ಇದು ಕನಕಪೀಠಕ್ಕೆ ಹೆಮ್ಮೆ ತರುವಂತಹ ವಿಷಯವಾಗಿದ್ದು ವಿಧಾನಸೌಧದಲ್ಲಿ ಕಂಬಳಿ ಬೀಸುವ ಮೂಲಕ ಅಭಿವೃದ್ಧಿಯ ಹೊಸ ಶಕೆ ಆರಂಭಿಸಲಾಗಿದೆ ಎಂದು ಹೇಳಿದರು.
ಈಶ್ವರಾನಂದಶ್ರೀ ಸಿದ್ಧರಾಮಶ್ರೀ, ಶಿವಾನಂದಶ್ರೀ, ಸಂಸದ ಎಚ್.ವಿಶ್ವನಾಥ, ಸಚಿವರಾದ ಮಹದೇವಪ್ಪ, ಸಂತೋಷ್‌ಲಾಡ್, ಎಚ್.ಎಸ್. ಮಹದೇವಪ್ರಸಾದ್, ಬಿ.ಟಿ. ಪರಮೇಶ್ವರ ನಾಯಕ್, ಶಾಸಕರಾದ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಮನೋಹರ ತಹಶೀಲ್ದಾರ್, ಎಂ.ಪಿ. ರವೀಂದ್ರ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಸಿ.ಎಸ್. ಶಿವಳ್ಳಿ, ಬಿ.ಜಿ. ಗೋವಿಂದಪ್ಪ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಸಚೇತಕ ಸಲೀಮ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಮುಂತಾದವರು ಉಪಸ್ಥಿತರಿದ್ದರು.