ಬೊಕ್ಕಸ ಲೂಟಿ ಮಾಡಿದ್ದೇ ಬಿಜೆಪಿ ಸಾಧನೆ
ಬ್ಯಾಡಗಿ: ಅಭಿವೃದ್ಧಿ ನೆಪದಲ್ಲಿ ಬೊಕ್ಕಸವನ್ನು ಲೂಟಿ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಕಾಮಗಾರಿಗಳ ಸಮಗ್ರ ತನಿಖೆ ನಡೆಸುವಂತೆ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಮೋಹನ ಬಿನ್ನಾಳ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆಯೊಂದನ್ನು ನೀಡಿರುವ ಅವರು, ಬಿಜೆಪಿ ಕಡೆಯ 2 ವರ್ಷಗಳ ಅವಧಿಯಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲಿಲ್ಲ. ಹೀಗಾಗಿ ಅಭಿವೃದ್ಧಿಗಾಗಿ ಬಿಡುಗಡೆಯಾದ ಹಣವನ್ನು ಜನಪ್ರತಿನಿಧಿಗಳ ಜೊತೆ ಕೈಜೋಡಿಸಿದ ಅಧಿಕಾರಿಗಳು ಲೂಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷಗಳಲ್ಲಿ ಬ್ಯಾಡಗಿ ಮತಕ್ಷೇತ್ರದ ವಿವಿಧ ಅಭಿವೃದ್ಧಿಗಳಿಗಾಗಿ 700 ಕೋಟಿ ಅನುದಾನ ಬಿಡುಗಡೆಯಾಗಿದೆ ಎನ್ನಲಾಗುತ್ತಿದೆ. ಹಾಗಿದ್ದರೆ ಎಲ್ಲೆಲ್ಲಿ ಯಾವ್ಯಾವ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ ಎಂಬುದನ್ನು ಬಹಿರಂಗಪಡಿಸಲಿ. ಆಗಿರುವಷ್ಟು ಕೆಲ ಕಾಮಗಾರಿಗಳು ಕಳಪೆಯಾಗಿದ್ದು, ಈ ಕುರಿತು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಹನುಮಂತ ಕಾಟೇನಹಳ್ಳಿ, ಆರ್.ಪಿ. ಬಾಳಿಕಾಯಿ, ಚನ್ನಬಸಪ್ಪ ಶೆಟ್ಟರ್ ಇದ್ದರು.