ಮಣಿಪಾಲ್‌ಗೆ ರಾತ್ರಿ ಬಸ್ ಸೌಲಭ್ಯ
ರಾಣಿಬೆನ್ನೂರು: ನಗರದಿಂದ ಮಣಿಪಾಲಗೆ ಹೊಸದಾಗಿ ಪ್ರಾರಂಭವಾದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಪೋ ವ್ಯವಸ್ಥಾಪಕ ಹೊನ್ನಪ್ಪ ಶನಿವಾರ ರಾತ್ರಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರತಿದಿನ ರಾತ್ರಿ 9.15ಕ್ಕೆ ಬಸ್ ಹೊರಟು ತಾಲೂಕಿನ ಮಾಗೋಡ, ಇಟಗಿ, ಕೃಷ್ಣಾಪುರ, ಹನುಮನಳ್ಳಿ, ಕೋಟಿಹಾಳ, ತುಮ್ಮಿನಕಟ್ಟಿ, ಹೊನ್ನಾಳಿ ಮಾರ್ಗವಾಗಿ ಮಣಿಪಾಲ್‌ಗೆ ಮರುದಿನ ಬೆಳಗ್ಗೆ ತಲುಪಲಿದೆ ಎಂದು ತಿಳಿಸಿದರು. ತಾಲೂಕಿನ ಬಡ ಕೂಲಿಕಾರರಿಗೆ, ಕೃಷಿ ಕಾರ್ಮಿಕರಿಗೆ, ರೈತರಿಗೆ ಇದರಿಂದ ನೇರವಾಗಿ ಮಣಿಪಾಲ ಆಸ್ಪತ್ರೆಗೆ ತಲುಪಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಅನುಕೂಲವಾಗುವುದು. ಸೇವೆಗೆ ಹೆಸರಾದ ಮಣಿಪಾಲ ಆಸ್ಪತ್ರೆಗೆ ತೆರಳಬೇಕೆಂದರೆ ಬಡವರು ರಾತ್ರಿ ಅಟೋಗಳಿಗೆ ಕೇಳಿದಷ್ಟು ಹಣ ಪಾವತಿಸಬೇಕಿತ್ತು. ಈಗ ನೇರವಾಗಿ ಬಸ್ ಹೊರಡುವುದರ ಜತೆಗೆ ತಾಲೂಕಿನ ಬಹುತೇಕ ಗ್ರಾಮಗಳ ಮೂಲಕ ಹೊರಡುವುದರಿಂದ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ ಎಂದರು. ಸುಮಾರು ವರ್ಷಗಳಿಂದ ಈ ಮಾರ್ಗವಾಗಿ ಮಣಿಪಾಲ್‌ಗೆ ಬಸ್ ಬಿಡಬೇಕೆಂದು ರೈತರು, ಕೂಲಿಕಾರರು ಹೋರಾಟ ಮಾಡಿದ್ದರು. ಇದರ ಫಲವಾಗಿ ಈ ಬಸ್ ಸಂಚಾರ ಆರಂಭವಾಗಿದ್ದು, ವ್ಯವಸ್ಥಾಪಕರೂ ಇದಕ್ಕೆ ಸಹಕರಿಸಿದ್ದಾರೆ ಎಂದು ರಾಜ್ಯ ರೈತ ಸಂಘದ ಸಂಚಾಲಕ ರವೀಂದ್ರಗೌಡ ಪಾಟೀಲ ಹೇಳಿದರು. ಬಸ್ ಹೊರಡುವ ಮುನ್ನ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ಹೊನ್ನಪ್ಪ, ಪರಮೇಶ ಚಿನ್ನಣ್ಣನವರ, ಶೇಖರಗೌಡ ಹೊಸಳ್ಳಿ, ಜಯಣ್ಣ ಮಾಗನೂರು, ಸುರೇಶ ಬಿದರಿ, ಬಸಪ್ಪ ಅಡವಿ ನಾಯಕ ಮತ್ತಿತರರು ಇದ್ದರು.