ಗುಟ್ಕಾ ನಿಷೇಧ: ನಿಯಮ ಉಲ್ಲಂಘಿಸಿದರೆ 10 ಲಕ್ಷ ದಂಡ
ಹಾವೇರಿ: ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಮತ್ತು ಪಾನಮಸಾಲಾ ಆಹಾರ ಪದಾರ್ಥಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ರಾಜ್ಯದಲ್ಲಿ ಗುಟ್ಕಾ ಮತ್ತು ಪಾನಮಸಾಲಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ವಿತರಣೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿ ಬರುವಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾರಣ ಹಾವೇರಿ ಜಿಲ್ಲಾದ್ಯಂತ ಡಬ್ಬಾ ಅಂಗಡಿಯಿಂದ ಹಿಡಿದು ದೊಡ್ಡ ಮಟ್ಟದ ಅಂಗಡಿಯಲ್ಲಿ ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ಮುಂದುವರೆಸಿದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಲಂ 57, 58 ಮತ್ತು 59ರ ಪ್ರಕಾರ ಕ್ರಮ ಜರುಗಿಸಲಾಗುವುದು. ಈ ನಿಯಮಗಳನ್ನು ಇನ್ನು ಮುಂದೆ ಉಲ್ಲಂಘಿಸಿದವರಿಗೆ ಗರಿಷ್ಠ ರು. 10 ಲಕ್ಷಗಳವರೆಗೆ ದಂಡ ಮತ್ತು ಸೆರೆವಾಸದ ಶಿಕ್ಷೆ ವಿಧಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಘೀ: ಸಾರ್ವಜನಿಕರಿಗೆ ಸಲಹೆ
ಹಾವೇರಿ: ಡೆಂಘೀ ಈಡಿಸ್ ಪ್ರಭೇದ, ಅದರಲ್ಲೂ ಪ್ರಮುಖವಾಗಿ ಈಡಿಸ್ ಈಜಿಪ್ಟೆ ಪ್ರಬೇಧದ ಸೊಳ್ಳೆಗಳ ಕಡಿತದಿಂದ ಹರಡುವ ವೈರಾಣು ರೋಗವಾಗಿದ್ದು, ಡೆಂಘೀ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಈ ಕೆಳಕಂಡ ಅಂಶಗಳನ್ನು ಗಮನಿಸಬೇಕೆಂದು ನಗರಸಭೆ ಪೌರಾಯುಕ್ತ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ. ಈಡಿಸ್ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಡಿಯುವ ಸೊಳ್ಳೆಯಾಗಿದ್ದು, 3ರಿಂದ 14 ದಿನಗಳ ಅವಧಿಯಲ್ಲಿ ಕಾಣಿಸಿಕೊಳ್ಳುವ ಚಳಿ-ಜ್ವರ, ವಾಂತಿ-ಭೇದಿ ಹಾಗೂ ಕಣ್ಣುಗಳ ಹಿಂಭಾಗದಲ್ಲಿ ಚಲನೆಯ ಅನುಭವ ಡೆಂಘೀ ರೋಗದ ಲಕ್ಷಣಗಳಾಗಿವೆ. ನಿಂತ ನೀರಲ್ಲಿ ಸೊಳ್ಳೆ ಉತ್ಪಾದನೆ ನಡೆಯುವುದರಿಂದ ವಾಸಸ್ಥಳದ ಅಕ್ಕಪಕ್ಕದಲ್ಲಿ ಯಾವುದೇ ರೀತಿಯಲ್ಲಿ ನೀರು ನಿಲ್ಲದಂತೆ ಹಾಗೂ ಟೈರ್, ತೊಟ್ಟಿ, ಎಳೆನೀರು ಬುರುಡೆ, ಬಾಟಲಿ ಮುಂತಾದ ಯಾವುದೇ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರು ಹೊರತುಪಡಿಸಿ ಇತರೆ ನೀರಿನ ಸಂಗ್ರಹಗಳಲ್ಲಿ ಸೊಳ್ಳೆ ಲಾರ್ವಾ ಕಂಡು ಬಂದಾಗ ಅಬೇಟನಂತಹ ಕ್ರಿಮಿನಾಶಕ ಔಷಧಿ ಸಿಂಪರಣೆ ಮೂಲಕ ಶುಚಿಗೊಳಿಸಬೇಕು. ಸೊಳ್ಳೆ ಕಡಿತದಿಂದ ಸಂರಕ್ಷಿಸಿಕೊಳ್ಳಲು ಪೂರ್ಣ ತೋಳುಗಳಿರುವ ಬಟ್ಟೆ ಧರಿಸಬೇಕು ಹಾಗೂ ಸೊಳ್ಳೆ ಪರದೆ ಅಥವಾ ಸೊಳ್ಳೆ ನಿರೋಧಕ ಮುಲಾಮು ಬಳಸಬೇಕು. ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತುರ್ತಾಗಿ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರಲ್ಲಿ ಚಿಕಿತ್ಸೆ ಹಾಗೂ ಸಲಹೆ ಪಡೆಯಬೇಕೆಂದು ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ.
ಲಲಿತಾಬಾಯಿ ನಿಧನ
ಹಾನಗಲ್ಲ: ಇಲ್ಲಿನ ಲಲಿತಾಬಾಯಿ ಭೀಮರಾವ್ ಕುಲಕರ್ಣಿ (68) ಮಂಗಳವಾರ ಸಂಜೆ ನಿಧನರಾದರು. ಮೃತರಿಗೆ ಓರ್ವ ಪುತ್ರಿ, ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವಿದೆ.