ಸುದ್ದಿ ಸಂಕ್ಷೇಪ
ಬಾಲ್ಯ ವಿವಾಹ ತಡೆ
ಹಾವೇರಿ: ತಾಲೂಕಿನ ಮಾಚಾಪುರ ಗ್ರಾಮದಲ್ಲಿ ಭಾನುವಾರ(ಜೂ. 2)ರಂದು ಹನುಮನಹಳ್ಳಿ ಗ್ರಾಮದ ವಧು ಕಾವೇರಿ ಚನ್ನಗೌಡ ಲೆಕ್ಕನಗೌಡ್ರ ಹಾಗೂ ಮಾಚಾಪುರ ಗ್ರಾಮದ ವರ ಹನುಮಂತಪ್ಪ ಸಣ್ಣಪ್ಪ ತಿಮ್ಮೇನಹಳ್ಳಿ ಇವರೊಂದಿಗೆ ವಿವಾಹ ಏರ್ಪಡಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಚೆನ್ನಮ್ಮ ಹೊಳಿಹೊಸೂರ, ತಹಸೀಲ್ದಾರ್ ಶಿವಲಿಂಗು, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಎಚ್. ಲಲಿತಾ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ, ವಧುವಿನ ವಯಸ್ಸಿನ ಶಾಲಾ ಪ್ರಮಾಣ ಪತ್ರವನ್ನು ಪರಿಶೀಲಿಸಲಾಗಿ 18 ವರ್ಷ ಪೂರ್ಣಗೊಳ್ಳದಿರುವ ಬಗ್ಗೆ ಖಚಿತಪಡಿಸಿಕೊಂಡು ವರ ಮತ್ತು ವಧುವಿನ ಪಾಲಕರಿಗೆ ಸೂಕ್ತವಾಗಿ ಕಾನೂನಿನ ಬಗ್ಗೆ ತಿಳಿವಳಿಕೆ ನೀಡಿ, ವಧುವಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡುವುದಾಗಿ ಲಿಖಿತವಾಗಿ ಹೇಳಿಕೆ ಪಡೆದು ಬಾಲ್ಯ ವಿವಾಹ ನಡೆಯದಂತೆ ತಡೆಯಲಾಯಿತೆಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಡಾ. ಗೋಕಾಕ ಟ್ರಸ್ಟ್ ಸಭೆ
ಹಾವೇರಿ: ಪದ್ಮಶ್ರೀ ಡಾ ವಿ.ಕೃ. ಗೋಕಾಕ ಅವರ ಟ್ರಸ್ಟ್ನ ಕಾರ್ಯ ಚಟುವಟಿಕೆ ಕುರಿತು ಚರ್ಚಿಸಲು ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ ಪಾಟೀಲ ಪುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಜೂನ್ 5ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಸಭಾ ಭವನದಲ್ಲಿ ಸಭೆ ಜರುಗಲಿದೆ. ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಭೆ ಜೂನ್ 5ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಸಭಾ ಭವನದಲ್ಲಿ ಸಭೆ ಜರುಗಲಿದೆ ಎಂದು ಟ್ರಸ್ಟ್ ಸದಸ್ಯ ಕಾರ್ಯದರ್ಶಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ತಿಳಿಸಿದ್ದಾರೆ.
ತಂಬಾಕು ವಿರೋಧಿ ದಿನಾಚರಣೆ
ಹಾವೇರಿ: ತಂಬಾಕು ಸೇವನೆ ವಿರೋಧಿ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಇತ್ತೀಚೆಗೆ ನಗರದ ತಾಲೂಕು ಆರೋಗ್ಯ ಭವನದಲ್ಲಿ ಜರುಗಿತು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಪಿ. ಸಂದೇಶ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ ಬಿ.ಎಸ್. ಮಾಶಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಹುದ್ದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್. ಪಾಟೀಲ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವರೆಡ್ಡಿ ಎಂ.ವಿ. ತಾಲೂಕು ಆರೋಗ್ಯಾಧಿಕಾರಿ ಪ್ರಭಾಕರ ಕುಂದೂರ ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕರಾಗಿ ಬಸವರಾಜ ಸಜ್ಜನರ, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿವರವಾಗಿ ತಿಳಿಸಿದರು.