ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಳೆಯಾದರೆ ಕಾಲ್ಕೀಳುವ ಕುಟುಂಬಗಳು!

Vishwanath S
Updated On : 6 Jun 2013, 1:15 am

ಹಾವೇರಿ: 'ಮಳೆ ಬಂದರೆ ಕೇಡಲ್ಲ, ಮನೆ ಮಗ ತಿಂದಷ್ಟೂ ಹೆಚ್ಚಲ್ಲ' ಎಂಬ ನಾಣ್ಣುಡಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮುಷ್ಟೂರು ಗ್ರಾಮಸ್ಥರ ಪಾಲಿಗೆ ಅಪವಾದ.
ಮುಷ್ಟೂರು ಕುಮದ್ವತಿ ಹಾಗೂ ತುಂಗಭದ್ರಾ ನದಿ ದಡದಲ್ಲಿರುವ ಪುಟ್ಟ ಗ್ರಾಮ. ಪಕ್ಕದ ಶಿವಮೊಗ್ಗ ಜಿಲ್ಲೆ, ಶಿರಸಿಗಳಲ್ಲಿ ಮಳೆಯಾದರೆ ಈ ಗ್ರಾಮದ ಜನತೆ ಬೆಚ್ಚಿ ಬೀಳುತ್ತಾರೆ.
ಮಳೆಗಾಲದಲ್ಲಿ ಕುಮದ್ವತಿ ಹಾಗೂ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಯಾವುದೇ ಸಂದರ್ಭದಲ್ಲಿ ಗ್ರಾಮಕ್ಕೆ ನೀರು ನುಗ್ಗಿ ಇಡೀ ಗ್ರಾಮ ಜಲಾವೃತ್ತಗೊಳ್ಳುವ ಭೀತಿ ಇದ್ದೇ ಇರುತ್ತದೆ. ಪ್ರವಾಹ ಭೀತಿಯಲ್ಲೇ ಬದುಕು ಕಟ್ಟಿಕೊಂಡಿರುವ ಈ ಗ್ರಾಮದ ಜನತೆ, ಆರ್ಥಿಕವಾಗಿಯೂ ತೀರಾ ಹಿಂದುಳಿದಿದ್ದಾರೆ. ಇದರಿಂದ ಕುಟುಂಬ ಪರಿವಾರ ಸಮೇತವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಗ್ರಾಮದಲ್ಲೇ ವಾಸ್ತವ್ಯ ಮಾಡಬೇಕಾಗಿದೆ.
ಇಂಥ ಸಮಸ್ಯೆಯಿಂದಲೇ ಬಳಲುತ್ತಿದ್ದ ಹಾವೇರಿ ತಾಲೂಕಿನ ಶಾಖಾರ ಹಾಗೂ ಮಣ್ಣೂರು ಗ್ರಾಮಗಳಿಗೆ ಮುಕ್ತಿ ಸಿಕ್ಕಿದ್ದು, ಅಲ್ಲಿನ ಜನರು ಈಗ ನೆಮ್ಮದಿಯಿಂದ ಇದ್ದಾರೆ. ಆದರೆ, ಮುಷ್ಟೂರು ಗ್ರಾಮಸ್ಥರಿಗೆ ಆ ಭಾಗ್ಯವಿನ್ನೂ ಬಂದಿಲ್ಲ.
ಮುಷ್ಟೂರು ಯಾಕಿಲ್ಲ?: ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಮುಷ್ಟೂರು ಗ್ರಾಮ ಸ್ಥಳಾಂತರಗೊಳ್ಳದೆ ಇರುವುದು ನಿದರ್ಶನ.
ಮಳೆ ಎಂದರೆ ಬೆಚ್ಚಿಬೀಳುತ್ತಿದ್ದ ಗ್ರಾಮಸ್ಥರ ಕೂಗು 2009ರಲ್ಲಿದ್ದ ಬಿಜೆಪಿ ಸರ್ಕಾರದ ಕರುಳು ಚುರ್ ಎನ್ನುವಂತೆ ಮಾಡಿತ್ತು. ಆಗಲೇ ಎಚ್ಚೆತ್ತುಕೊಂಡ ಸರ್ಕಾರ, ಶಾಖಾರ ಹಾಗೂ ಮಣ್ಣೂರು ಮತ್ತು ಮುಷ್ಟೂರು ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಯಿತು.
ಆಗ ಮುಷ್ಟೂರು ಗ್ರಾಮದಲ್ಲಿ ವಾಸವಾಗಿದ್ದ 320 ಕುಟುಂಬಗಳಿಗೆ ಗ್ರಾಮದಿಂದ ಸ್ವಲ್ಪ ದೂರದಲ್ಲಿದ್ದ ಜಮೀನು ಗುರುತಿಸಿದ ಜಿಪಂ ಹಾಗೂ ಜಿಲ್ಲಾಡಳಿತ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದವು.
ಮನೆಗಳ ನಿರ್ಮಾಣಕ್ಕೆ ಸರ್ಕಾರ 80 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಯಾವೊಂದು ಗುತ್ತಿಗೆ ಕಂಪನಿಯೂ ಮನೆಗಳ ನಿರ್ಮಾಣಕ್ಕೆ ಮುಂದಾಗಿಲ್ಲ. ಇದೇ ಗ್ರಾಮಸ್ಥರಿಗೆ ಶಾಪವಾಗಿ ಪರಿಣಮಿಸಿದೆ. ಏತನ್ಮಧ್ಯೆ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಗುತ್ತಿಗೆ ಕಂಪನಿ ಮುಷ್ಟೂರು ಗ್ರಾಮವನ್ನು ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳಲು ಮುಂದೆ ಬಂದಿತ್ತಾದರೂ, ಕೊನೆಗೆ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಮನೆಗಳ ನಿರ್ಮಾಣಕ್ಕೆ ಪಡೆದುಕೊಂಡಿದ್ದ 80 ಲಕ್ಷವನ್ನೂ ಹಿಂದಿರುಗಿಸಿತು. ಈ ಎಲ್ಲ ಪ್ರಕ್ರಿಯೆಗಳಿಂದ ಸರ್ಕಾರದಿಂದ ಬಿಡುಗಡೆಗೊಂಡಿದ್ದ ಅನುದಾನ ಮತ್ತೆ ಹಿಂದಿರುಗುವಂತಾಯಿತು.
ಮುಷ್ಟೂರು ಗ್ರಾಮದಲ್ಲೇ ವಾಸವಾದರೆ ಯಾವುದೇ ಸಂದರ್ಭ ಆಸ್ತಿಪಾಸ್ತಿ ಸೇರಿದಂತೆ ಪ್ರಾಣಹಾನಿ ಸಂಭವಿಸಬಹುದೆಂಬ ಆಂತಕದಿಂದ ಗ್ರಾಮದ 88 ಕುಟುಂಬಗಳು ಜಿಪಂ ಹಾಗೂ ಜಿಲ್ಲಾಡಳಿತ ಅಭಿವೃದ್ಧಿಪಡಿಸಿದ ಸ್ಥಳದಲ್ಲಿ ಸ್ವಂತ ಹಣ ಖರ್ಚು ಮಾಡಿ ಮನೆಗಳನ್ನು ಕಟ್ಟಿಕೊಂಡಿವೆ. ಆದರೆ, ಮಿಕ್ಕ ಬಡ ಕುಟುಂಬಗಳಿಗೂ ಏನೂ ಮಾಡುವುದೂ ಸಾಧ್ಯವಾಗದೇ ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕೋದು ಅನಿವಾರ್ಯವಾಗಿದೆ.
ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುವುದೋ ನೋಡಬೇಕು.

- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement