ಜನತೆ ಪರ ಸೇವೆ ಸಲ್ಲಿಸಿದ ತೃಪ್ತಿ ಇದೆ
ರಾಣಿಬೆನ್ನೂರು: ಗ್ರಾಮ ಪಂಚಾಯಿತಿ ನೌಕರನಾಗಿ, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಯ ಗ್ರಾಮೀಣ ಪ್ರದೇಶದ ಬಡವರ ಹಾಗೂ ರೈತರಿಗೆ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಾಲೂಕಿನ ಐರಣಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಆರ್.ಎಸ್. ಗೌಡಶಿವಣ್ಣನವರ ಹೇಳಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಆರ್.ಎಸ್. ಗೌಡಶಿವಣ್ಣನವರ, ತಾಲೂಕಿನ ಐರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚುನಾಯಿತ ಸದಸ್ಯರು ಹಾಗೂ ಸಾರ್ವಜನಿಕರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ನಿ ಜೊತೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯದ ಗ್ರಾಮಾಂತರ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ಸೇವೆ ಮಾಡುತ್ತಿರುವ, ಗ್ರಾಪಂ ನೌಕರರ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಸಿಬ್ಬಂದಿ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಅಲ್ಪವಾಗಿದ್ದು, ಸೇವೆಗೆ ತಕ್ಕ ಸಂಬಳ ನೀಡದಿದ್ದರೂ ಗ್ರಾಮದ ಜನರಿಗೆ ಸಮಯಕ್ಕೆ ಸರಿಯಾಗಿ ಕುಡಿಯುವ ನೀರು, ಬೀದಿದೀಪ, ರಸ್ತೆ ಹಾಗೂ ಚರಂಡಿಗಳ ದುರಸ್ತಿ, ಪಂಚಾಯಿತಿ ವ್ಯಾಪ್ತಿಗೊಳಪಟ್ಟಿರುವ ಹಳ್ಳಿಗಳಲ್ಲಿನ ಶಾಲೆಗಳಲ್ಲಿ ಪರಿಸರ ನಿರ್ಮಾಣಕ್ಕಾಗಿ ಸಸಿಗಳನ್ನು ನೆಡುವುದು ಸೇರಿದಂತೆ ಸಾರ್ವಜನಿಕರ ಆರೋಗ್ಯಕ್ಕೆ ಸ್ವಚ್ಛತೆ ಕಾಪಾಡುವುದು ಗ್ರಾಪಂ ಆದ್ಯ ಕರ್ತವ್ಯವಾಗಿದೆ ಎಂದರು.
ತಾಲೂಕಿನ ಅಸುಂಡಿ, ಕಮದೋಡ, ಉಕ್ಕುಂದ, ಚಳಗೇರಿ, ಜೋಯಿಸರಹರಳಹಳ್ಳಿ, ಚಿಕ್ಕಕುರುವತ್ತಿ ಹಾಗೂ ಐರಣಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದ ಸಮಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಗ್ರಾಪಂಗೆ ಬಂದಿದ್ದ ಕೊಟ್ಯಂತರ ರುಪಾಯಿ ಅನುದಾನ ಬಳಕೆ ಮಾಡಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಉತ್ತಮ ರಸ್ತೆ, ಪಕ್ಕಾ ಗಟಾರಗಳನ್ನು ನಿರ್ಮಿಸಲಾಗಿದೆ ಎಂದರು. ಗ್ರಾಮೀಣ ಬಡ ಜನರಿಗೆ ಮನೆಗಳನ್ನು ಸೂಕ್ತ ಕಲ್ಪಿಸಿದ ತೃಪ್ತಿ ನನಗೆ ಸಿಕ್ಕಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಐರಣಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪಾಟೀಲ ಪಿಡಿಒ ಗೌಡಶಿವಣ್ಣನವರ ಸೇವೆ ಗುಣಗಾನ ಮಾಡಿದರು. ಉಪಾಧ್ಯಕ್ಷ ಬಸಪ್ಪ ಕಟ್ಟಿಮನಿ, ಸದಸ್ಯರಾದ ಬಸವರಾಜಪ್ಪ ಹೊನ್ನಾಳಿ, ಕೃಷ್ಣಪ್ಪ ಬಾರ್ಕಿ, ಕೊಟ್ರೇಶ ಅಣ್ಣೇರ, ಕುಬೇರಪ್ಪ ಕಂಬಳಿ, ಗುಲಾಬಸಾಬ್ ಅವರಂಗಜೆಬ್, ಗಂಗಮ್ಮ ನಡುವಿನಮನಿ, ರೇಣುಕವ್ವ ಬಡಿಗೇರ ಇದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ ಬೇವಿನಮರದ ಸ್ವಾಗತಿಸಿದರು. ಬಿಲ್ ಕಲೆಕ್ಟರ್ ರಮೇಶ ವಂದಿಸಿದರು.