ಸುದ್ದಿ ಸಂಕ್ಷೇಪ
ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಹಾವೇರಿ: ಕರ್ನಾಟಕ ಸರ್ಕಾರದ ಅಮೃತ ಯೋಜನೆಯಲ್ಲಿ ಧಾರವಾಡ ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ಧಾರವಾಡ (73), ಗದಗ (72), ಹಾವೇರಿ (178) ಹಾಗೂ ಉತ್ತರ ಕನ್ನಡ (9) ಜಿಲ್ಲೆಗಳ ಒಟ್ಟು 332 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅರ್ಹ ಫಲಾನುಭವಿ (ವಿಧವೆಯರು ಮತ್ತು ಸಂಕಷ್ಟಕ್ಕೊಳಗಾದ ಮಹಿಳೆಯರು) ಗಳಿಗೆ ರು. 35,000 ಗಳ ಘಟಕ ವೆಚ್ಚದಲ್ಲಿ (ಸರ್ಕಾರದ ಆದೇಶದನ್ವಯ ಶೇ. 50ರ ಅನುದಾನವಿದ್ದು, ಶೇ. 50 ಫಲಾನುಭವಿ ವಂತಿಕೆ ರು. 17,500) ಹೈನುರಾಸು ಖರೀದಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರಾದ ಆರ್.ಎಸ್. ಸಿದ್ಧರಾಜು (ಮೊ. 9480682730), ಗದಗ ಜಿಲ್ಲೆಯ ಡಾ. ಮಹದೇವಪ್ಪ ಮಡಿವಾಳರ (ಮೊ 9480682732), ಹಾವೇರಿ ಜಿಲ್ಲೆಯ ಆರ್.ಎಸ್. ಹೆಗಡೆ (ಮೊ. 9480682709) ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಯರಾಮ್ ಭಟ್ 9480682740) ಅವರನ್ನು ಸಂಪರ್ಕಿಸಬಹುದೆಂದು ಧಾರವಾಡ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗೆ ಮನವಿ
ಹಾವೇರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಥಳೀಯ ಕೆಎಲ್ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರಾಚಾರ್ಯರು ಹಾಗೂ ಶಿಕ್ಷಕ ಸಿಬ್ಬಂದಿಯೊಂದಿಗೆ ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಂತರ ಜಾಥಾದಲ್ಲಿ ಜಿಲ್ಲಾ ಆಡಳಿತ ಭವನಕ್ಕೆ ಬಂದ ವಿದ್ಯಾರ್ಥಿಗಳು, ಪರಿಸರ ಸಂರಕ್ಷಣೆ ಕುರಿತ ವಿವಿಧ ಬೇಡಿಕೆಗಳ ಮನವಿಯೊಂದನ್ನು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರಿಗೆ ಸಲ್ಲಿಸಿದರು. ಪ್ರಾಚಾರ್ಯ ಎಸ್.ಬಿ. ಶಿಳ್ಳಿನ ಅವರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ, ಜಿಲ್ಲೆಯ ಎಲ್ಲ ಸರ್ಕಾರಿ ಕಟ್ಟಡ ಹಾಗೂ ಶಾಲಾ ಕಾಲೇಜುಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ, ರಸ್ತೆ ಪಕ್ಕದಲ್ಲಿ ಸಸಿಗಳನ್ನು ನೆಡುವುದು, ನಗರದಿಂದ ಜಿಲ್ಲಾ ಆಡಳಿತ ಭವನದವರೆಗಿನ ರಸ್ತೆ ದುರಸ್ತಿ ಹಾಗೂ ಹಾವೇರಿಯ ದೊಡ್ಡ ಕೆರೆಗಳ ಹೂಳು ತೆಗೆಸುವ ಕಾರ್ಯಕ್ರಮಗಳನ್ನು ಕೊಳ್ಳಬೇಕೆಂದು ಮನವಿ ಮಾಡಿದರು.
ಭರಮಪ್ಪ ಕೆಂಚನಗೌಡ್ರ ನಿಧನ
ಬ್ಯಾಡಗಿ: ಇಲ್ಲಿನ ಅಗಸನಹಳ್ಳಿ ನಿವಾಸಿ ಭರಮಪ್ಪ ಹೊನ್ನಪ್ಪ ಕೆಂಚನಗೌಡ್ರ (55) ಗುರುವಾರ ಮುಂಜಾನೆ ಅನಾರೋಗ್ಯದ ಕಾರಣ ಮೃತರಾಗಿದ್ದಾರೆ. ಮೃತರಿಗೆ ಒಬ್ಬ ಪುತ್ರ ಹಾಗೂ ಒಬ್ಬಳು ಪುತ್ರಿಯಿದ್ದು, ಅಪಾರ ಬಂಧು ಬಳಗ ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಸಂಜೆ ಅಗನಸಹಳ್ಳಿಯ ರುದ್ರಭೂಮಿಯಲ್ಲಿ ನೇರವೇರಿತು.
ಗಣ್ಯರ ಸಂತಾಪ: ಶಾಸಕ ಬಸವರಾಜ ಶಿವಣ್ಣನವರ, ವಿಧಾನಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಎಸ್.ಆರ್. ಪಾಟೀಲ, ಪುರಸಭೆ ಸದಸ್ಯ ಬಸವರಾಜ ಛತ್ರದ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.