ಮೊರಾರ್ಜಿ, ವಾಜಪೇಯಿ ಶಾಲೆಗೆ ತಾತ್ಕಾಲಿಕ ಬ್ರೇಕ್
ಹಾವೇರಿ: ಸರ್ಕಾರ ಬದಲಾವಣೆಯಾಗಿದ್ದೆ ತಡ ರಾಜ್ಯದಲ್ಲಿ ಪಕ್ಷ ರಾಜಕಾರಣ ಪರ್ವ ಆರಂಭವಾಗಿ ಬಿಟ್ಟಿದೆ..
ಜಿಲ್ಲೆಯ ನಾಲ್ಕು ತಾಲೂಕಿಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಮಂಜೂರಾತಿ ನೀಡಿದ್ದ ಮೂರು ಮೊರಾರ್ಜಿ ವಸತಿ ಶಾಲೆ ಹಾಗೂ ಒಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ ಆರಂಭಕ್ಕೆ ಹಾಲಿ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದ್ದು ತಾಜಾ ನಿರ್ದಶನ.
ರಾಜ್ಯದ ಆಡಳಿತ ಚುಕ್ಕಾಣಿ ಯಾವ ಪಕ್ಷದ ಕೈಯಲ್ಲಿಯೇ ಇರಲಿ, ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಆಡಳಿತ ಪಕ್ಷಗಳು ಕಾರ್ಯಭಾರ ನಿರ್ವಹಿಸಬೇಕು. ಹಿಂದಿನ ಸರ್ಕಾರದಲ್ಲಿ ಯೋಜನೆಗಳನ್ನು ಜಾರಿಗೆ ತಂದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಬಹುದೆಂಬ ಏಕೈಕ ಕಾರಣದಿಂದ ಹಾಲಿ ಸರ್ಕಾರ ವಸತಿ ಶಾಲೆಗಳ ಆರಂಭಕ್ಕೆ ಬ್ರೇಕ್ ಹಾಕಿದ್ದು, ವಿದ್ಯಾರ್ಥಿ ಹಾಗೂ ಪಾಲಕರ ಆಕ್ರೋಶಕ್ಕೆ ಗುರಿಯಾಗಿದೆ.
ಸುತ್ತೋಲೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಮಂಜೂರಾತಿ ನೀಡಿದ್ದ ಮೊರಾರ್ಜಿ ಶಾಲೆಗಳ ಆರಂಭಕ್ಕೆ ತಡೆವೊಡ್ಡಿದೆ. ಈ ಕಾರ್ಯಕ್ಕೆ ಸರ್ಕಾರ ಕಂಡುಕೊಂಡಿರುವ ಮಾರ್ಗ ನಿಜಕ್ಕೂ ವಿಷಾದನೀಯ. ರಾಜ್ಯದ ಎಲ್ಲ ಸಮಾಜ ಕಲ್ಯಾಣ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿರುವ ಸರ್ಕಾರ ಮೂಲಸೌಕರ್ಯಗಳ ಕೊರತೆ ಮುಂದಿಟ್ಟುಕೊಂಡು ಈ ಶಾಲೆಗಳ ಆರಂಭಕ್ಕೆ ಕೊಕ್ ನೀಡಿದೆ.
ಜಿಲ್ಲೆಯಲ್ಲಿ ನಾಲ್ಕು: ಹಾವೇರಿ ಜಿಲ್ಲೆ ಶೈಕ್ಷಣಿಕವಾಗಿ ಅಷ್ಟೊಂದು ನೆಲೆಕಂಡುಕೊಂಡಿಲ್ಲ. ಅಲ್ಲದೇ ಜಿಲ್ಲೆಯ ಮಕ್ಕಳು ಗುಣಮಟ್ಟದ ಶಿಕ್ಷಣಕ್ಕಾಗಿ ಪಕ್ಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಅಥವಾ ದೂರದ ಬೆಂಗಳೂರಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂಬುದನ್ನು ಅರಿತ ಸರ್ಕಾರ, ಜಿಲ್ಲೆಯಲ್ಲಿ ಮೂರು ಮೊರಾರ್ಜಿ ವಸತಿ ಶಾಲೆಗಳು ಹಾಗೂ ಒಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಆರಂಭಕ್ಕೆ ತಥಾಸ್ತು ಅಂದಿತ್ತು.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕು, ರಾಣಿಬೆನ್ನೂರು, ಬ್ಯಾಡಗಿ ಹಾಗೂ ಹಾನಗಲ್ಲಿನಲ್ಲಿ ಮೊರಾರ್ಜಿ ವಸತಿ ಶಾಲೆ ಹಾಗೂ ಶಿಗ್ಗಾಂವಿಯಲ್ಲಿ ಅಟಲ್ ಬಿಹಾರಿ ವಸತಿ ಶಾಲೆ ಆರಂಭಕ್ಕೆ ಅನುಮೋದನೆ ನೀಡಿತ್ತು.
ರಾಜಕೀಯ ಹಿತಾಸಕ್ತಿ: ನಾಲ್ಕು ಹೊಸ ಶಾಲೆಗಳ ಆರಂಭ ಖಚಿತ ಎಂದು ಭಾವಿಸಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಹೊಸ ಶಾಲೆಗಳ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡೆ ವಿದ್ಯಾರ್ಥಿಗಳ ಕೌನ್ಸೆಲಿಂಗ್ ನಡೆಸಿತ್ತು ಎಂಬುದು ಗಮನಾರ್ಹ.
ಈ ಮಧ್ಯೆ ಸರ್ಕಾರ ಮೇ 31ರಂದು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಸುತ್ತೋಲೆಯೊಂದನ್ನು ಕಳುಹಿಸಿ ಅದರಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ಆಯಾ ಶಾಲೆಗಳ ಆರಂಭವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ನಮೂದಿಸಿದ್ದು, ಸರ್ಕಾರಕ್ಕೆ ಜನಸಾಮಾನ್ಯರ ಹಿತಕ್ಕಿಂತಲೂ ರಾಜಕೀಯ ಹಿತಾಸಕ್ತಿಯೇ ಮೇಲು ಎಂಬುದು ಸ್ಪಷ್ಟವಾಗುತ್ತದೆ.
ಇತರೆ ಶಾಲೆಗಳಿಗೆ: ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಿದ್ದ ಕೌನ್ಸಿಲಿಂಗ್ಗೆ ಹಾಜರಾದವರ ಪೈಕಿ 48 ವಿದ್ಯಾರ್ಥಿಗಳನ್ನು ಹಾವೇರಿಯ ವಸತಿ ಶಾಲೆಯಲ್ಲಿ ದಾಖಲಾತಿ ನೀಡಲಾಗಿದೆ. ಮಿಕ್ಕುಳಿದ ವಿದ್ಯಾರ್ಥಿಗಳಿಗೆ ಆಯಾ ತಾಲೂಕಿನಲ್ಲಿರುವ ವಸತಿ ಶಾಲೆಗಳಲ್ಲಿ ದಾಖಲಾತಿ ಕಲ್ಪಿಸಿಕೊಡುವಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯೋನ್ಮುಖವಾಗಿದೆ.
ಸರ್ಕಾರದ ಈ ದ್ವಂದ ನೀತಿಯಿಂದಾಗಿ, ಹಳೆಯ ಮೊರಾರ್ಜಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾದಂತಾಗಿದೆ. ಇದು ಪಠ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಅನುಮಾನ ಶಿಕ್ಷಕ ವರ್ಗ, ಪಾಲಕರನ್ನು ಕಾಡತೊಡಗಿದೆ.
ಜನಹಿತ ಆಗಿರಬೇಕು: ಸರ್ಕಾರಗಳು ಬದಲಾವಣೆ ಆಗುವುದು ಸಾಮಾನ್ಯ ಸಂಗತಿ. ಹಳೆಯ ಸರ್ಕಾರ ಕೈಗೊಂಡ ನಿರ್ಧಾರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದರೆ ಅಂತವುಗಳನ್ನು ನಿರ್ದಾಕ್ಷಿಣ್ಯವಾಗಿ ಹಾಲಿ ಸರ್ಕಾರಗಳು ತೆಗೆದು ಹಾಕುವ ಮೂಲಕ ಶ್ರೀಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಆದರೆ, ಜನತೆಯ ಅಭ್ಯುದಯಕ್ಕೆ ಅನುಕೂಲವಾಗುವಂತಹ ಯೋಜನೆಗಳನ್ನು ತಮ್ಮ ಸರ್ಕಾರದಲ್ಲಿ ಜಾರಿಗೆ ತರುವುದರಿಂದ ಅದರ ಕೀರ್ತಿ ಹಿಂದಿನ ಸರ್ಕಾರಕ್ಕೆ ಹೋಗಬಹುದೆಂಬ ದೂರಾಲೋಚನೆ ಸರ್ಕಾರ ಹೊಂದುವುದು ಸರಿಯಾದ ಕ್ರಮವಲ್ಲ.
ಜನಪರ ಯೋಜನೆ ಯಾವುದೇ ಸರ್ಕಾರದಲ್ಲಿ ಬಂದಿರಲಿ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ಜಾರಿಗೆ ಬಂದ ನಂತರ ಅವುಗಳ ಪ್ರಯೋಜನ ಜನಸಾಮಾನ್ಯರಿಗೆ ಸರಿಯಾಗಿ ಆಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ನಿಗಾವಹಿಸಬೇಕಾದ ಕೆಲಸವೂ ಆಯಾ ಸರ್ಕಾರದ್ದೇ ಆಗಿರುತ್ತದೆ ಎಂದು ಬೇರೆಯಾಗಿ ಹೇಳಬೇಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಜನಹಿತ ಯೋಜನೆಗಳು ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಿರಲಿ ಅವುಗಳನ್ನು ಪ್ರಾಮಾಣಿಕವಾಗಿ ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಲ್ಲಿ ಮಾತ್ರ ಜನಸಾಮಾನ್ಯರ ಪ್ರಶಂಸೆಯಾಗಿ ಪಾತ್ರರಾಗಲು ಸಾಧ್ಯ. ಇಲ್ಲವಾದರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗಾದ ಗತಿ ಕಾಂಗ್ರೆಸ್ಗೆ ಮುಂದಿನ ಚುನಾವಣೆಯಲ್ಲಿ ಆಗಲಿದೆ ಎಂದು ಬೇರೆಯಾಗಿ ಹೇಳಬೇಕಿಲ್ಲ.
ಬಿ.ಕೆ. ಮಹೇಂದ್ರ