ಶಿಕ್ಷಣ ಶುದ್ಧೀಕರಣ ಆಗಲಿ: ಎಸ್ಎಫ್ಐ
ಬ್ಯಾಡಗಿ: ಕಲುಷಿತಗೊಂಡಿರುವ ಶಿಕ್ಷಣ ಕ್ಷೇತ್ರವನ್ನು ಶುದ್ಧೀಕರಿಸುವ ಮೂಲಕ ಶೈಕ್ಷಣಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವಂತೆ ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಪೂಜಾರ ಮಾತನಾಡಿ, ಬಿಜೆಪಿ ಸರ್ಕಾರ ಅವಧಿಯಲ್ಲಿ ಎಲ್ಲೆಂದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡುವ ಮೂಲಕ ಶಿಕ್ಷಣ ವ್ಯಾಪಾರೀಕರಣಗೊಳಿಸಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ತಾತ್ಕಾಲಿಕ ಕೊರತೆಯನ್ನು ಸೃಷ್ಟಿಸಿ ಮನಬಂದಂತೆ ಡೊನೇಷನ್ ಪಡೆಯುವ ಮೂಲಕ ಹಣ ಮಾಡುವ ಅಡ್ಡೆಗಳಾಗಿವೆ ಎಂದು ಆರೋಪಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸಿದ ಲಾಬಿಗೆ ಮಣಿದ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿರುವುದನ್ನು ಲೆಕ್ಕಿಸದೇ ರಾಜ್ಯದಲ್ಲಿ ಸುಮಾರು 3174 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕುವ ಮೂಲಕ ಎಚ್ಚರಿಕೆ ವಹಿಸಬೇಕಲ್ಲದೇ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚದಿರಲು ಮನವಿ ಮಾಡಿದರು.
ತಾಲೂಧ್ಯಕ್ಷ ವಿಜಯಕುಮಾರ, ರಾಜ್ಯದಲ್ಲಿ 38 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿಲ್ಲ. ಹೀಗಾಗಿ ಡಿಇಡಿ, ಬಿಇಡಿ ಶಿಕ್ಷಣಾರ್ಥಿಗಳು ಬೀದಿ ಪಾಲಾಗಿದ್ದಾರೆ. ಶೀಘ್ರ ಶಿಕ್ಷಕರನ್ನು ನೇಮಕಾತಿಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಕೇಸರೀಕರಣಕ್ಕೆ ಬ್ರೇಕ್: ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಸೇರಿದಂತೆ ಕೇಸರೀಕರಣಕ್ಕೆ ಸಂಬಂಧಿಸಿದ ಕೆಲ ವಿಷಯಗಳಿದ್ದು, ಪರಿಷ್ಕರಣೆಗೊಳಿಸುವ ಮೂಲಕ ಸಾಮಾಜಿಕ ನ್ಯಾಯದಡಿ ಪುಸ್ತಕಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ನೀಡುವಂತೆ ಆಗ್ರಹಿಸಿದ್ದಾರೆ.