ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಕ್ತದಾನ ಮಾಡಿ ಜೀವ ಉಳಿಸಿ: ಡಾ. ಸಜ್ಜನ

Mainashree
Updated On : 9 Jun 2013, 11:54 am

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 8
ದಾನಗಳಲ್ಲಿ ಮಹಾದಾನ ರಕ್ತದಾನ. ರಕ್ತಸ್ರಾವದಿಂದ ಪ್ರತಿನಿತ್ಯ ಸಾವು ಬದುಕಿನ ಜೊತೆ ಹೋರಾಟ ನಡೆದಿರುತ್ತದೆ. ರೋಗಿಗಳ ಜೀವ ರಕ್ಷಣೆಗೆ ರಕ್ತದಾನ ಮಾಡಿ, ಜೀವ ಉಳಿಸಲು ಮುಂದಾಗುವಂತೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ೤ ಬಸವರಾಜ ಸಜ್ಜನ ಯುವ ಸಮುದಾಯಕ್ಕೆ ಕರೆ ನೀಡಿದರು.
ಶನಿವಾರ ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ (ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ) ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳು, ನೆಹರು ಯುವಕೇಂದ್ರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಸರಕಾರಿ ಮತ್ತು ಸರಕಾರೇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
3 ತಿಂಗಳಿಗೊಮ್ಮೆ: ರಕ್ತದ ಕೊರತೆಯಿಂದಾಗಿ ಅನೇಕ ಬಡ ರೋಗಿಗಳು ದಿನನಿತ್ಯ ಸಾವನ್ನಪ್ಪುತ್ತಾರೆ. ಅವರ ಜೀವ ರಕ್ಷಣೆಗೆ ಯುವ ಸಮುದಾಯ ಸ್ವಯಂಪ್ರೇರಿತವಾಗಿ ಮುಂದಾಗಿ, ರಕ್ತ ನೀಡುವಂತೆ ತಿಳಿಸಿದರು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ದೇಹಕ್ಕೆ ಯಾವುದೇ ರೀತಿ ಹಾನಿಯಾಗದು. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದೆಂದು ಹೇಳಿದರು.
ಕ್ಯಾನ್ಸರ್‌ನಿಂದ ಮುಕ್ತಿ: ರಕ್ತದಾನದಿಂದ ಮಾನವ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಬಿಳಿ ಹಾಗೂ ಕೆಂಪು ರಕ್ತ ಕಣಗಳ ಸಂಖ್ಯೆಯು ಅಧಿಕವಾಗುತ್ತದೆ. ಅಲ್ಲದೆ, ಹೃದಯಾಘಾತ ಮತ್ತು ಕ್ಯಾನ್ಸರ್ ರೋಗವನ್ನು ದೂರವಿಡಬಹುದಾಗಿದೆ ಎಂದರು.
14ರಂದು ವಿಶ್ವ ರಕ್ತದಾನಿಗಳ ದಿನ: ರಕ್ತದ ಗುಂಪುಗಳನ್ನು ಕಂಡುಹಿಡಿದ ವಿಜ್ಞಾನಿ ಕಾಲರ್‌ಲ್ಯಾಂಡ್ ಸ್ಪೀನರ್ ಅವರ ಜನ್ಮದಿನವಾದ ಜೂ. 14ರಂದು ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸುತ್ತಿದೆ. ಈ ವರ್ಷ ಸ್ವಯಂಪ್ರೇರಿತ ರಕ್ತದಾನದ ಬಗೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜೂನ್ 2ರಿಂದ 29ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬ್ಲಡ್ ಮೊಬೈಲ್ ಬಸ್ ಎಂಬ ಸಂಚಾರಿ ರಕ್ತ ಸ್ವೀಕಾರ ವಾಹನವನ್ನು  ಆರೋಗ್ಯ ಇಲಾಖೆಯ ರಕ್ತ ಚಾಲನಾ ಪರಿಷತ್ತಿನಿಂದ ಕಳುಹಿಸಲಾಗಿದ್ದು, ಸಂಚಾರಿ ವಾಹನ ಇಂದು ಹಾವೇರಿಗೆ ಆಗಮಿಸಿದೆ. ಈ ವಾಹನದಲ್ಲಿ ಏಕಕಾಲಕ್ಕೆ 4 ಜನರಿಂದ ರಕ್ತದಾನ ಮಾಡಲು ಸ್ಥಳಾವಕಾಶವಿದೆ ಎಂದು ತಿಳಿಸಿದರು.
ರಕ್ತ ನೀಡಿ ಜೀವ ಉಳಿಸಿ: ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ಮಾತನಾಡಿ, ವಿಶ್ವದಲ್ಲಿ ವಿಜ್ಞಾನಿಗಳು ಏನೆಲ್ಲವನ್ನು ಕಂಡು ಹಿಡಿದಿದ್ದಾರೆ. ಆದರೆ, ರಕ್ತ ಉತ್ಪಾದಿಸುವ ಯಂತ್ರವನ್ನು ಮಾತ್ರ ಸಂಶೋಧಿಸಲು ಈವರೆಗೂ ಸಾಧ್ಯವಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಜೀವ ಉಳಿಸಿ ಎಂದರು. ಸಾರ್ವಜನಿಕರು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ರಕ್ತದಾನ ಮಾಡಿ, ಜೀವ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ಕೈಜೋಡಿಸಿ: ನೆಹರು ಯುವ ಕೇಂದ್ರದಿಂದ ಜಿಲ್ಲಾ ಮಟ್ಟ ಸೇರಿದಂತೆ ಪ್ರತಿ ತಾಲೂಕಿನಲ್ಲಿಯೂ ಪ್ರತಿ ತಿಂಗಳು ರಕ್ತದಾನ ಶಿಬಿರ ಏರ್ಪಡಿಸಲು ಯೋಜನೆ ರೂಪಿಸಲಾಗುವುದು. ಈ ರಕ್ತದಾನ ಶಿಬಿರ ಯಶಸ್ವಿಗೆ ಯುವ ಸಮುದಾಯ ಕೈಜೋಡಿಸಬೇಕೆಂದು ಹೇಳಿದರು.
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ೤ ಎನ್. ಮುರಳೀಧರ ಮಾತನಾಡಿ, ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ರಕ್ತದಾನಿಗಳು ರಕ್ತದಾನಕ್ಕೆ ಮುಂದೆ ಬರುತ್ತಿದ್ದಾರಾದರೂ ರಕ್ತದ ಬೇಡಿಕೆ ಅಧಿಕವಾಗಿರುವುದರಿಂದ, ರಕ್ತನಿಧಿಗೆ ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಬಗ್ಗೆ ಅರಿವು ಮೂಡಬೇಕಿದೆ ಎಂದರು.  ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ನೀವೇ ರಕ್ತ ನೀಡಲು ಮುಂದಾಗದಿದ್ದರೆ, ಉಳಿದವರ ಗತಿ ಏನು? ಆದ್ದರಿಂದ ಇದನ್ನರಿತು ಯುವಕರು ರಕ್ತದಾನಕ್ಕೆ ಮುಂದಾಗುವಂತೆ ಹೇಳಿದರು. ಎನ್‌ಎಸ್‌ಎಸ್, ಎನ್‌ಜಿಓ ಹಾಗೂ ಎನ್‌ಸಿಸಿ ಮತ್ತಿತರ ಸೇವಾಸಂಸ್ಥೆಗಳು ರಕ್ತದಾನ ಶಿಬಿರ ಏರ್ಪಡಿಸಲು ಮುಂದಾಗಿ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ೤ ಬಿ.ಎಸ್. ಮಾಶಾಳ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಎಸ್. ಕೋರಿಶೆಟ್ಟರ್, ಡಾ೤ ಎಸ್.ಪಿ. ಶಂಕ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ೤ ಪ್ರಭಾಕರ ಕುಂದೂರ, ಔಷಧಿ ಸಹಾಯಕ ಕೆ. ನಾಗರಾಜ, ಮುತ್ತುರಾಜು ಪಾಲ್ಗೊಂಡಿದ್ದರು.
ರಕ್ತದಾನ ಮಾಡಿದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಚನ್ನಪ್ಪ, ಹಂಸಭಾವಿ ಮೃತ್ಯುಂಜಯ ಕಾಲೇಜು ಪ್ರಾಚಾರ್ಯ ಪ್ರೊ೤ ಪಿ.ಜಿ. ಪತ್ರೆ, ಚೈತನ್ಯ ಅಭಿವೃದ್ಧಿ ಸಂಸ್ಥೆಯ ಎಚ್.ಎಸ್. ಮನೀಕ ಹಾಗೂ ಮಾಧುರಿ ನೇಜಕರ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಯುವಕರು ಮತ್ತು ಸಾರ್ವಜನಿಕರು ಸೇರಿದಂತೆ 47 ಜನರು ರಕ್ತದಾನ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಸ್ಪತ್ರೆಯಿಂದ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಡಿಎಚ್‌ಓ ಡಾ೤ ಎಚ್.ಎಸ್. ರಾಘವೇಂದ್ರಸ್ವಾಮಿ ಜಾಥಾಕ್ಕೆ ಚಾಲನೆ ನೀಡಿದರು. ರೋಟರಿ, ರೆಡ್‌ಕ್ರಾಸ್ ಸಂಸ್ಥೆ ಎನ್‌ಸಿಸಿ, ಎನ್‌ಎಸ್‌ಎಸ್ ನೆಹರೂ ಯುವ ಕೇಂದ್ರದ ಯುವ ಜನರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement