ಸುದ್ದಿ ಸಂಕ್ಷೇಪ
ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಹ್ವಾನ
ನರೇಗಲ್ಲ: ನರೇಗಲ್ಲದಲ್ಲಿ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಈಚೆಗೆ ತಾಲೂಕು ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ತೀರ್ಮಾನಿಸಿತು. ನರೇಗಲ್ಲ ಮತ್ತು ನರೇಗಲ್ಲ ಪಪಂ ವ್ಯಾಪ್ತಿಯಲ್ಲಿನ ಎಲ್ಲ ಪ್ರಾಥಮಿಕ, ಪ್ರೌಢ ಮತ್ತು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಲಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ಇಚ್ಛಿಸುವ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಬಹುತೇಕ ಕನ್ನಡ ನಾಡಿಗೆ ಸಂಬಂಧಿಸಿದ ಹಾಡು, ರೂಪಕ, ನೃತ್ಯಗಳ ಪ್ರದರ್ಶನ ಮಾಡಬಹುದು. ಅದಕ್ಕಾಗಿ ಆಸಕ್ತರು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳವರು, ಸಾಂಸ್ಕೃತಿಕ ಕಲಾ ಮೇಳದವರು ತಮ್ಮ ವಿವರಗಳನ್ನೊಳಗೊಂಡ ವಿವರವಾದ ಮಾಹಿತಿಯನ್ನು, ತಾವು ಪ್ರದರ್ಶನ ಮಾಡಲಿರುವ ನೃತ್ಯ, ರೂಪಕದ ವಿವರ, ಸಂಬಂಧಿಸಿದವರ ದೂರವಾಣಿ ಸಂಖ್ಯೆಯೊಂದಿಗೆ ಜೂ. 10 ರೊಳಗೆ ತಲುಪುವಂತೆ ಅರುಣ ಕುಲಕರ್ಣಿ, ಶಿಕ್ಷಕರು, ಮಾಲತೇಶ ಕೃಪಾ, ಕಾಲೇಜು ರಸ್ತೆ, ನರೇಗಲ್ಲ-ಕೋಡಿಕೊಪ್ಪ-582119 ತಾ. ರೋಣ, ಜಿ. ಗದಗ ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9448468136 ಇಲ್ಲಿಗೆ ಸಂಪರ್ಕಿಸಬಹುದು.
ನಾಳೆ ಗ್ರಂಥಾಲಯ ವರ್ಷ
ರೋಣ: ತಾಲೂಕಿನ ಹೊನ್ನಿಗನೂರ ಭಗತ್ಸಿಂಗ್ ಯುವಕ ಸಂಘ ಆರಂಭಿಸಿದ ಸಾರ್ವಜನಿಕ ಗ್ರಂಥಾಲಯದ ಪ್ರಥಮ ವರ್ಷಾಚರಣೆ ನಿಮಿತ್ತ ಜೂ. 10ರ ಬೆಳಗ್ಗೆ 10ಕ್ಕೆ ಗಡ್ಡಿ ಚಕ್ಕಡಿ ಓಡಿಸುವ ಸ್ಪರ್ಧೆಯನ್ನು ಸಂಘದಿಂದ ಹಮ್ಮಿಕೊಳ್ಳಲಾಗಿದೆ. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ದಶರಥ ಗಾಣಿಗೇರ ಗ್ರಂಥಾಲಯ ವರ್ಷಾಚರಣೆ ಕಾರ್ಯಕ್ರಮದ ಜ್ಯೋತಿ ಬೆಳಗುವರು.
ಇಂದು ಪದಗ್ರಹಣ ಕಾರ್ಯಕ್ರಮ
ಹಾನಗಲ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾನಗಲ್ಲ ನಗರದ ಪ್ರಗತಿಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭವು ಇಲ್ಲಿನ ಛತ್ರಪತಿ ಶಿವಾಜಿ ಮರಾಠಾ ಸಭಾಭವನದಲ್ಲಿ ಜೂನ್ 9ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಮನೋಹರ ತಹಸೀಲ್ದಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆ ನಿರ್ದೇಶಕ ವಸಂತ ಸಾಲಿಯಾನ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೆ. ಸದಾನಂದ, ಜೆಇಕೋ ಅಧ್ಯಕ್ಷ ಎ.ಎಸ್. ಬಳ್ಳಾರಿ, ಪುರಸಭೆ ಸದಸ್ಯ ಕಲ್ಯಾಣಕುಮಾರ ಶೆಟ್ಟರ್, ದಾನಪ್ಪ ಚಿಕ್ಕೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನ ಯಶಸ್ವಿಗೊಳಿಸಿ
ಮುಂಡರಗಿ: ಮುಂಡರಗಿ ತಾಲೂಕು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಯಾವುದೇ ಸಾಹಿತ್ಯಿಕ, ಸಾಂಸ್ಕೃತಿ ಕಾರ್ಯಗಳು ನಡೆದರೆ ಜಾತಿ ಬೇಧ, ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಆಚರಿಸುತ್ತಾರೆ. ಅದರಂತೆ ಜೂ. 15 ಮತ್ತು 16ರಂದು ಜರುಗಲಿರುವ ಗದಗ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಅವರು ಶನಿವಾರ ಜೂನ್ 15,16 ರಂದು ಮುಂಡರಗಿಯಲ್ಲಿ ಜರುಗಲಿರುವ ಗದಗ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಬೃಹತ್ ಬೈಕ್ ರ್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅನ್ನದಾನೀಶ್ವರ ಮಠದಿಂದ ಪ್ರಾರಂಭವಾದ ಬೈಕ್ರ್ಯಾಲಿಯು ಪುರಸಭೆ ವ್ಯಾಪ್ತಿಯ ಬ್ಯಾಲವಾಡಗಿ, ಹೆಸರೂರ ಪ್ಲಾಟ್, ಶಿರೋಳ, ರಾಮೇನಹಳ್ಳಿಗಳಲ್ಲಿ ಸಂಚರಿಸಿ ನಂತರ ತೋಂಟದಾರ್ಯ ಮಠದಲ್ಲಿ ಮುಕ್ತಾಯಗೊಂಡಿತು. ಡಾ. ಅನ್ನದಾನೀಶ್ವರ ಶ್ರೀ, ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಇತರರಿದ್ದರು.