ಸುದ್ದಿ ಸಂಕ್ಷೇಪ
30ರಿಂದ ಪತ್ರಕರ್ತರ ರಾಷ್ಟ್ರೀಯ ಸಮಾವೇಶ
ಹಾವೇರಿ: ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಸಮಾವೇಶ ಜೂನ್ 30ರಿಂದ ಜುಲೈ 3ರ ವರೆಗೆ ಛತ್ತಿಸಗಡ ರಾಜಧಾನಿಯಾದ ರಾಯಪುರನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ಕಾಶೆಟ್ಟಿ ತಿಳಿಸಿದ್ದಾರೆ. ಜೂ. 29ರಂದು ಸಂಜೆ ರಾಯಪುರದಲ್ಲಿ ಸಮಾವೇಶಕ್ಕೆ ಬರುವ ಪ್ರತಿನಿಧಿಗಳನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ಅಂದು ಸಂಜೆಯಿಂದಲೇ ಸಮಾವೇಶದ ಕ್ಯಾಂಪ್ ಆರಂಭಗೊಳ್ಳುತ್ತದೆ. 30ರಂದು ಬೆಳಗ್ಗೆ 11-30ಕ್ಕೆ ಛತ್ತೀಸಗಡ ಮುಖ್ಯಮಂತ್ರಿ ಡಾ ರಾಮನ್ಸಿಂಗ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ನಂತರ ಒಕ್ಕೂಟದ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಜುಲೈ 1ರಂದು ರಾಯಪುರಕ್ಕೆ 400 ಕಿ. ಮೀಟರ್ ದೂರದಲ್ಲಿರುವ ಬಾಸ್ಟರ್ಗೆ ತೆರಳಲಾಗುವುದು. ಬಾಸ್ಟರ್ಗೆ ಹೋಗುವ ದಾರಿ ದಟ್ಟ ಅರಣ್ಯ ಪ್ರದೇಶ ಹಾಗೂ ಸುಂದರ ಪ್ರದೇಶವಾಗಿದೆ. ಸೌಂದರ್ಯದ ಸವಿಯನ್ನು ಪ್ರತಿನಿಧಿಗಳು ಸವಿಯಬಹುದು. ದಾರಿಯಲ್ಲಿ ಮಾನದಷ್ಟೈಶ್ವರಿ ದೇವಿಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಪ್ರದೇಶ ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ನಕ್ಸಲ್ರೊಂದಿಗೆ ಮಾತುಕತೆ ನಡೆಸುವ ಅವಕಾಶ ಪತ್ರಕರ್ತರಿಗೆ ಲಭ್ಯವಾಗಲಿದೆ. 2ರಂದು ಪ್ರತಿನಿಧಿಗಳು ರಾಯಪುರದ ಬಿಲೈಗೆ ವಾಪಾಸ್ಸಾಗಲಿದ್ದಾರೆ. ಅಲ್ಲಿ ಎಫ್ಡಬ್ಲ್ಯುಜೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬೆಂಗಳೂರಿನಿಂದ ರಾಯಪುರಕ್ಕೆ ವಾರಕ್ಕೆ ಒಮ್ಮೆ ಮಾತ್ರ ರೈಲು ಇದೆ. ಅದು ಪ್ರತಿ ಮಂಗಳವಾರ ಯಶವಂತಪುರದಿಂದ ಹೊರಡುತ್ತದೆ. ಅದಾಗದಿದ್ದರೆ ಬೆಂಗಳೂರಿನಿಂದ ನಾಗಪುರಕ್ಕೆ ಟಿಕೆಟ್ ಪಡೆಯಬೇಕು. ನಾಗಪುರದಿಂದ ರಾಯಪುರಕ್ಕೆ 4 ಗಂಟೆ ಪ್ರಯಾಣ. ಅಲ್ಲಿ ಬೇರೆ ರೈಲನ್ನು ಹತ್ತಿ ರಾಯಪುರಕ್ಕೆ ತೆರಳಬೇಕು. ಸ್ಥಳೀಯವಾಗಿ ಛತ್ತಿಸಗಡದ ಪ್ರವಾಸೋದ್ಯಮ ಇಲಾಖೆ ಪ್ರವಾಸವೇರ್ಪಡಿಸಿದ್ದರಿಂದ ಪಾಲ್ಗೊಳ್ಳುವ ಪ್ರತಿನಿಧಿಗಳ ಹೆಸರನ್ನು ಮುಂಚಿತವಾಗಿಯೇ ನೋಂದಾಯಿಸಬೇಕಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ ಪ್ರಯಾಣದರ ಹೊರತುಪಡಿಸಿ ಇತರೆ ಹೆಚ್ಚಿನ ಖರ್ಚುಗಳಿರದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಪಾಲ್ಗೊಳ್ಳಲು ಮನವಿ ಮಾಡಲಾಗಿದ್ದು, ಹೆಚ್ಚಿನ ವಿವರಗಳಿಗೆ ಅಶೋಕ ಕಾಶೆಟ್ಟಿ ದೂ: 9448136601 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಕಾರು ಡಿಕ್ಕಿ: ವೃದ್ಧ ಸಾವು
ಶಿಗ್ಗಾಂವಿ: ಟಾಟಾ ಸಫಾರಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ದನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಿಸನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಶನಿವಾರ ನಡೆದಿದೆ. ಯಲಬುರ್ಗಾ ಜಿಲ್ಲೆ ತೊಂಡಿಹಾಳ ಗ್ರಾಮದ ಶಂಕ್ರಪ್ಪ ಬಸರಳ್ಳಿ (65) ಮೃತಪಟ್ಟ ದುರ್ದೈವಿ. ನಿಧನ ಹೊಂದಿದ್ದನಾರಾಯಣಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಜಿ. ಅಂಗಡಿ ಅವರ ಶವ ಸಂಸ್ಕಾರಕ್ಕೆಂದು ಬಿಸನಹಳ್ಳಿ ಗ್ರಾಮಕ್ಕೆ ಬಂದಿದ್ದ ಶಂಕ್ರಪ್ಪ ಬಸರಳ್ಳಿ ಬಹಿರ್ದೆಸೆಗೆ ಹೋಗಲು ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ದೂರು ದಾಖಲಿಸಿಕೊಂಡ ಬಂಕಾಪುರ ಪೊಲೀಸ್ ಠಾಣೆ ಪಿಎಸ್ಐ ಆರ್.ಎಫ್. ದೇಸಾಯಿ ತನಿಖೆ ಕೈಗೊಂಡಿದ್ದಾರೆ.