ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಧರ್ಮ ಮಾರ್ಗದಲ್ಲಿ ನಡೆಯಿರಿ

Vishwanath S
Updated On : 10 Jun 2013, 11:23 am

ಹಿರೇಕೇರೂರು: ಸಮಾಜದಲ್ಲಿ ಪ್ರತಿಯೊಬ್ಬರು ಆಚಾರ-ವಿಚಾರ, ಉತ್ತಮ ನಡೆ, ನುಡಿ ಹಾಗೂ ಸುಸಂಕೃತ ಜೀವನ ನಡೆಸುವ ಮೂಲಕ ಧರ್ಮ ಮಾರ್ಗದಲ್ಲಿ ಜೀವನ ನಡೆಸಬೇಕು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಶಾಸಕ ಯು.ಬಿ. ಬಣಕಾರ ನುಡಿದರು.
ಅವರು ತಾಲೂಕಿನ ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಶಿವಯೋಗಿಗಳ ಮಠ ಜಂಗಮ ಕ್ಷೇತ್ರದಲ್ಲಿ ಶ್ರೀ ಗುರು ಮೂಕಪ್ಪ ಶಿವಯೋಗಿಗಳ 75ನೇ ಪುಣ್ಯಸ್ಮರಣೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಉತ್ತಮ ಗುಣ ಬೆಳೆಸಿಕೊಳ್ಳಿ: ನಾವು ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು. ಶಿವಶರಣರ ಬದುಕಿನ ನೈಜ ಬದುಕನ್ನು ಅರ್ಥೈಸಿಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಸಮಾಜದ ಅಭಿವೃದ್ಧಿಯಲ್ಲಿ ಮಠ, ಮಾನ್ಯಗಳು ಸದ್ದಿಲ್ಲದೆ ಅವಿರತವಾಗಿ ಶ್ರಮಿಸುವ ಮೂಲಕ ಪ್ರಮುಖ ಪಾತ್ರ ವಹಿಸಿವೆ. ಜನಪ್ರತಿನಿಧಿಗಳು ಸಮಾಜದಲ್ಲಿ ಉತ್ತಮ ಗುಣ ಬೆಳೆಸಿಕೊಂಡು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮಾರ್ಗದರ್ಶಕರಾಗಬೇಕು ಎಂದು ನುಡಿದರು.
ಮಹಿಳೆಯರಿಂದ ದೇಶ ಪ್ರಗತಿ: ಜಿಲ್ಲಾ ಪಂಚಾಯಿತಿ ಸದಸ್ಯೆ ಬಸಮ್ಮ ಅಬಲೂರು ಮಹಿಳಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಸಬಲೀಕರಣ ಬರಿ ಮಾತಿನಂದಾಗದು. ಇಂದಿನ ಮಹಿಳೆಯರು ಸಾಕ್ಷರರಾಗುವ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು. ಮಹಿಳೆಯರು ಸಮಾಜದಲ್ಲಿ ಸದಾ ಉದ್ಯೋಗದಲ್ಲಿ ತೊಡಗುವ ಮೂಲಕ ದೇಶದ ಪ್ರಗತಿಗೆ ಪೂರಕವಾಗಿರುವುದು ಸಂತಸ ತಂದಿದೆ.
ಸುಸಂಸ್ಕೃತ ಜೀವನಕ್ಕೆ ನಾಂದಿ: ಪ್ರಾಚೀನ ಕಾಲದ ಮಹಿಳೆಯರು ತಾವು ಕಂಡ ಬದುಕಿನ ಅನುಭವಗಳನ್ನು ವಚನ ರೂಪದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅವುಗಳು ಸಮಾಜದ ಉದ್ಧಾರಕ್ಕೆ ಪೂರಕವಾಗಿವೆ. ಅವು ಎಂದೆಂದಿಗೂ ಪ್ರಸ್ತುತ ಆದ್ದರಿಂದ ಮಹಿಳೆಯರು ಮಕ್ಕಳಿಗೆ ಸುಸಂಕೃತ ಜೀವನ ನಡೆಸಲು ವಚನಗಾರ್ತಿಯರ ವಿವರ ತಿಳಿಸಿಕೊಡಬೇಕು ಎಂದು ಕರೆ ನೀಡಿದರು.
ಶಿವಮೊಗ್ಗದ ಬ್ರಹ್ಮಕುಮಾರಿ ಆಶ್ರಮದ ರಾಜಯೋಗಿನ ಅನುಸೂಯಾ, ಮಹಿಳಾ ಸಬಲೀಕರಣ ವಿಷಯ ಕುರಿತು ಉಪನ್ಯಾಸ ನೀಡಿದರು. ಹುಬ್ಬಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಶಿವಬಸವ ಸ್ವಾಮಿಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು, ವಿರೂಪಾಕ್ಷ ಸ್ವಾಮಿಗಳು ಹಾಗೂ ಬಾವಿ ಪೀಠಾಧಿಪತಿ ಮಹಾಂತದೇವರು ಸಾನ್ನಿದ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶೋಭಾ ಬೆಂಡಗೇರಿ, ಪುಷ್ಪಾ ದಕ್ಷಶೆಟ್ಟಿ, ರಾಜಣ್ಣ ಹೊಳ್ಳಿಗೌಡ್ರ. ಬಸವರಾಜ ಪೂಜಾರ, ಚನ್ನಬಸಯ್ಯ ವಿರಕ್ತಮಠ, ಬಸನಗೌಡ ಸಂಕಣ್ಣನವರ, ನಾರಾಯಣಸ್ವಾಮಿ ಕಪನಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಕರ್ತೃ ಗದ್ದುಗೆಗೆ ಮಹಾರುದ್ರಭೀಷೇಕ, ಸಹಸ್ರ ಬಿಲ್ವಾರ್ಚನೆ, ರಾಜೋಪಚಾರ, ಪೂಜಾ ಮಹಾ ಮಂಗಲಾರತಿ ನಡೆಸಲಾಯಿತು. ಶಿಕ್ಷಕಿ ರತ್ಮಮ್ಮ ಜೋಗಿಹಳ್ಳಿ ಸ್ವಾಗತಿಸಿದರು. ಜಯಮ್ಮ ಪಾಟೀಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement