ಮತ್ತಿಬ್ಬರು ಮಕ್ಕಳಲ್ಲಿ ಡೆಂಘೀ ಪತ್ತೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜೂ. 9
ತಾಲೂಕಿನ ಚಿಕ್ಕಬಾಸೂರಿನ ಗ್ರಾಮದಲ್ಲಿ ಬಾಲಕನೊಬ್ಬನ ಸಾವಿಗೆ ಕಾರಣವಾಗಿದ್ದ ಶಂಕಿತ ಡೆಂಘೀ ಜ್ವರ ಭಾನುವಾರ ಅದೇ ಗ್ರಾಮದ ಅವಳಿ ಮಕ್ಕಳಲ್ಲಿ ಪತ್ತೆಯಾಗಿದ್ದು, ರೋಗದಿಂದ ಬಳಲುತ್ತಿರುವ ಮಕ್ಕಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರವಷ್ಟೇ ಗ್ರಾಮದ ವಿಕಾಸ್ ನಾಗನಗೌಡ ಕಾಡನಗೌಡ್ರ ಎಂಬ ಬಾಲಕನನ್ನು ಬಲಿ ತೆಗೆದುಕೊಂಡಿದ್ದ ಹೆಮ್ಮಾರಿ ಡೆಂಘೀ, ಇದೀಗ ಗ್ರಾಮದ ರೇಖಾ ಅಣ್ಣಪ್ಪ ಚಕ್ರಸಾಲಿ (6), ರೇಣುಕಾ ಅಣ್ಣಪ್ಪ ಚಕ್ರಸಾಲಿ (6) ಎಂಬ ಅವಳಿ ಮಕ್ಕಳಲ್ಲಿ ಕಾಣಿಸಿಕೊಂಡಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಬಾಲಕಿಯರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ಹಾವೇರಿಯ ಶಿವಜ್ಯೋತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದ್ದು, ಜ್ವರ ಗುಣಮುಖವಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.
ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ.
ಲಾರ್ವಾ ಪತ್ತೆ: ಡೆಂಘೀ ಕುರಿತು ಮುಂಜಾಗ್ರತೆ ವಹಿಸಿದ ತಾಲೂಕು ವೈದ್ಯಾಧಿಕಾರಿಗಳು ಗ್ರಾಮದಲ್ಲಿ ಆರೋಗ್ಯ ಸಹಾಯಕರ 6 ತಂಡಗಳನ್ನು ರಚಿಸಿ ಲಾರ್ವಾ ಸರ್ವೆ ನಡೆಸಿತು. ಗ್ರಾಮದಲ್ಲಿ ಸುಮಾರು 400 ಮನೆಗಳಿಗೆ ಭೇಟಿ ನೀಡಿದ್ದು, ವೈದ್ಯಾಧಿಕಾರಿಗಳ ತಂಡವು ಸುಮಾರು 60 ಮನೆಗಳಲ್ಲಿ ಲಾರ್ವಾ ಇರುವುದನ್ನು ದೃಢಪಡಿಸಿದ್ದು, ಲಾರ್ವಾಗಳನ್ನು ನಾಶಪಡಿಸಿದ ತಂಡವು ಮನೆಗಳಿಗೆ ತೆರಳಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.
ಕಾಯಿಸಿ ಆರಿಸಿದ ನೀರು ಕುಡಿಯಬೇಕು, ಮನೆಯ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಜ್ವರ ಕಾಣಿಸಿಕೊಂಡಲ್ಲಿ ನಿರ್ಲಕ್ಷ್ಯ ತೋರದೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಂಡವು ಸಲಹೆ ನೀಡಿದೆ.
ಡೆಂಘೀ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಇದೀಗ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು ಮನೆಯಿಂದ ಹೊರಗೆ ತೆರಳದಂತೆ ನೋಡಿಕೊಳ್ಳುತ್ತಿದ್ದಾರೆ. ಕೃಷಿಕರ ಸಂಖ್ಯೆ ಹೆಚ್ಚಾಗಿರುವ ಗ್ರಾಮದಲ್ಲಿ ಇದಕ್ಕಿದ್ದಂತೆ ವಕ್ಕರಿಸಿದ ಡೆಂಘೀ ಜ್ವರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.