ಶಾಲೆ ಪಕ್ಕ ಮಾಂಸದಂಗಡಿ
ಬ್ಯಾಡಗಿ: ಯಾವುದೇ ಕ್ರಮಕ್ಕೆ ಮುಂದಾಗದ ಪುರಸಭೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಎಸ್‌ಜೆಜೆಎಂ ಪ್ರೌಢಶಾಲೆ ಕಾಂಪೌಂಡ್‌ಗೆ ಹೊಂದಿರುವ ಕೋಳಿ ಮಾಂಸದ (ಚಿಕನ್ ಸ್ಟಾಲ್) ಮಾರಾಟದ ಅಂಗಡಿಗಳು ಇನ್ನೂ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿನ ವಿದ್ಯಾರ್ಥಿಗಳು ಮಾತ್ರ ದುರ್ವಾಸನೆಯಿಂದ ಮುಕ್ತರಾಗಿಲ್ಲ.
ಚಿಕನ್ ಸೆಂಟರ್‌ಗಳಿಂದ ಬರುವ ದುರ್ವಾಸನೆಯಿಂದ ಶಾಲೆಯಲ್ಲಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಒಳಗೆ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿಮಾರ್ಣವಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರತ್ತಿದೆ. ಇದರಿಂದ ಕೆಲ ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರವೇಶ ಪಡೆಯಲು ಹಿಂಜರಿಯುತ್ತಿದ್ದಾರೆ. ಮಾಂಸದ ತುಣಕು ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ತಿನ್ನಲು ಹಂದಿ ಹಾಗೂ ನಾಯಿಗಳು ಶಾಲೆಯ ಆವರಣದೊಳಗೆ ಪ್ರವೇಶಿಸುತ್ತಿವೆ. ಪಕ್ಕದಲ್ಲೇ ಬಿಸಿಯೂಟದ ಅಡುಗೆ ಕೋಣೆಯಿದ್ದು ಅಡುಗೆ ತಯಾರಕ ಸಿಬ್ಬಂದಿ ಕೂಡ ಕೆಲಸ ನಿರ್ವಹಿಸಲು ನಿರಾಕರಿಸುತ್ತಿದ್ದಾರೆ. ಕೂಡಲೇ ತೆರುವುಗೊಳಿಸುವಂತೆ ಎಸ್‌ಜೆಜೆಎಂ ಬೋಧಕ ಸಿಬ್ಬಂದಿ ಸಲ್ಲಿಸಿದ ದೂರಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡದ ಪುರಸಭೆಯಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿದ್ಯಾರ್ಥಿ ಸಂಘಟನೆ ವಿರೋಧ: ಎಸ್‌ಜೆಜೆಎಂ ಪ್ರೌಢ ಶಾಲೆಯ ಕಾಂಪೌಂಡ್‌ಗೆ ಹೊಂದಿರುವ ಕೋಳಿ ಮಾಂಸ ಮಾರಾಟ ಅಂಗಡಿಗಳಿಂದ ಬರುವ ದುರ್ವಾಸನೆಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವಂತಹ ವಾತಾವರಣ ಮರಿಚೀಕೆಯಾಗಿದೆ. ಮೊದಲೇ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರಲು ಹಿಂದು-ಮುಂದು ನೋಡುತ್ತಿರುವ ಈ ದುರ್ವಾಸನೆಯಿಂದ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುವ ಆತಂಕವಿದೆ ಎಂದು ಎಸ್‌ಎಫ್‌ಐ ವಿದ್ಯಾರ್ಥಿ ಮುಖಂಡ ಮಂಜುನಾಥ ಪೂಜಾರ ಪ್ರತಿಕ್ರಿಯಿಸಿದರು.
ಹೋರಾಟ ಅನಿವಾರ್ಯ: ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಹೀಗಿದ್ದರೂ ಪುರಸಭೆ ನಿಯಮ ಬಾಹಿರವಾಗಿ ಕೋಳಿ ಮಾಂಸದ (ಚಿಕನ್ ಸ್ಟಾಲ್) ಮಾರಾಟದ ಅಂಗಡಿ ತೆರೆಯಲು ಅನುಮತಿ ನೀಡಿದೆ. ಕೂಡಲೇ ಇವುಗಳನ್ನು ತೆರವುಗೊಳಿಸಿ ಶಾಲೆಯ ವಾತಾವರಣದಲ್ಲಿ ನೈರ್ಮಲ್ಯ ಕಾಪಾಡದಿದ್ದಲ್ಲಿ ಸಂಘಟನೆಯು ಹೋರಾಟ ನಡೆಸುವುದು ಅನಿವಾರ್ಯ ಎಂದು ಎಬಿವಿಪಿ ಮುಖಂಡ ವೀರೇಶ್ ಮತ್ತಿಹಳ್ಳಿ ಎಚ್ಚರಿಸಿದ್ದಾರೆ.
ನೋಟಿಸ್ ನೀಡುವೆ: ತರಕಾರಿ ಮಾರಾಟದ ಅಂಗಡಿಗಳನ್ನು ಪ್ರಾರಂಭಿಸುವ ಉದ್ದೇಶದಿಂದ ಪುರಸಭೆಯು ಸ್ಟಾಲ್‌ಗಳನ್ನು ನಿರ್ಮಿಸಿದೆ. ಆದರೆ, ಹಿಂದಿನ ಆಡಳಿತ ಮಂಡಳಿ ಮೂಲ ಉದ್ದೇಶಕ್ಕೆ ಬಳಸದೇ ಕೋಳಿ ಮಾಂಸ ಮಾರಾಟಗಾರರಿಗೆ ನೀಡಿದ್ದು ನಿಯಮಕ್ಕೆ ವಿರೋಧವಾಗಿದೆ. ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಮಾಂಸವನ್ನು ಕತ್ತರಿಸುವುದು ಕಾನೂನಿಗೆ ವಿರೋಧವಿದೆ. ನಾಳೆಯೇ ತೆರವುಗೊಳಿಸಲು ಗಡುವು ವಿಧಿಸಿ ನೋಟಿಸ್ ನೀಡುವುದಾಗಿ ಮುಖ್ಯಾಧಿಕಾರಿ ಹಾಳಕಲ್ಲಾಪುರ ಪತ್ರಿಕೆಗೆ ತಿಳಿಸಿದರು.