ಶಿಗ್ಗಾಂವಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬ.ಫ. ಯಲಿಗಾರ
ಶಿಗ್ಗಾಂವಿ: ಜೂ. 14ರಂದು ಜರುಗಲಿರುವ ಶಿಗ್ಗಾಂವಿ ತಾಲೂಕು 2ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳೀಯ ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಬ.ಫ. ಯಲಿಗಾರ ಅವರಿಗೆ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪದಾಧಿಕಾರಿಗಳು ಅಧಿಕೃತ ಆಹ್ವಾನ ನೀಡಿ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ವಿನಂತಿಸಿದರು.
ಬ.ಫ. ಯಲಿಗಾರ ನಿವಾಸ 'ರಸರಿಷಿ'ಯಲ್ಲಿ ಯಲಿಗಾರ ದಂಪತಿಗಳಿಗೆ ಫಲಪುಷ್ಪ, ಸಮ್ಮೇಳನದ ವಿನಂತಿ ಪತ್ರ ಹಾಗೂ ಆಮಂತ್ರಣ ನೀಡಿದ ಸ್ವಾಗತ ಸಮಿತಿ ಅಧ್ಯಕ್ಷ ಶಂಕರಗೌಡ್ರ ಪಾಟೀಲ, ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಾಹಿತಿ ಬ.ಫ. ಯಲಿಗಾರ ಅವರನ್ನು ಸರ್ವಾನುಮತದಿಂದ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರಿಗೆ ಅಧಿಕೃತ ಆಹ್ವಾನ ನೀಡುವ ಮೂಲಕ ಇಂದು ಸಮ್ಮೇಳನದ ಸಂಪ್ರದಾಯಕ್ಕೆ ಚಾಲನೆ ನೀಡಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಬಸವರಾಜ ಬಸರಿಕಟ್ಟಿ, ಪುರಸಭೆ ಸದಸ್ಯ ಭರಮಜ್ಜ ನವಲಗುಂದ, ಜೆಸಿಐ ಅಧ್ಯಕ್ಷ ಡಾ. ಜಿ.ಸಿ. ನಿಡಗುಂದಿ, ಪ್ರಾಚಾರ್ಯ ಜಿ.ಎನ್. ಯಲಿಗಾರ, ಎನ್.ಎನ್. ಪಾಟೀಲ, ಕೆ.ಬಿ. ಚನ್ನಪ್ಪ, ಜಯಣ್ಣ ಹೆಸರೂರು, ಎಂ.ಎನ್. ಹೊಳಲಾಪುರ, ಡಾ. ಕುಮಾರ ಪಾಟೀಲ, ವಿಜಯಕುಮಾರ ಕಿಳ್ಳಿಕ್ಯಾತ, ಸಿ.ವಿ. ಮತ್ತಿಗಟ್ಟಿ, ಇದ್ದರು. ಜೆಸಿಐ ಸಂಘಟನೆಯಿಂದ ಯಲಿಗಾರ ದಂಪತಿಯನ್ನು ಅಭಿನಂದಿಸಲಾಯಿತು.