ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸರ್ಕಾರ ನೀಡುವುದು ಸಾಲವಲ್ಲ, ಪ್ರೋತ್ಸಾಹಧನ

Vishwanath S
Updated On : 11 Jun 2013, 11:12 am

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 10
ಸರ್ಕಾರ ರೈತರಿಗೆ ರು. 1 ಲಕ್ಷಗಳವರೆಗೆ ನೀಡುತ್ತಿರುವುದು ಸಾಲ ಅಲ್ಲ, ಪ್ರೋತ್ಸಾಹ ಧನವಾಗಿದೆ ಎಂದು ರೈತ ಮುಖಂಡ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.
ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಸೋಮವಾರ ಬೆಳಗ್ಗೆ ಇಲ್ಲಿನ ಶಿವಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಹಾರ ಭದ್ರತೆ ಹೆಚ್ಚು ಕಡಿಮೆ ಆಗಬಾರದೆಂಬ ಉದ್ದೇಶದಿಂದ ಸರ್ಕಾರ ರೈತರಿಗೆ ನೀಡುತ್ತಿರುವುದು ಪ್ರೋತ್ಸಾಹ ಧನವಾಗಿದೆ. ಆರ್ಥಿಕ ನೀತಿಯಂತೆ ಸಾಲ ಪಡೆದವರಿಂದ ಬ್ಯಾಂಕ್‌ಗಳು ಕಡ್ಡಾಯವಾಗಿ ಆ ಹಣಕ್ಕೆ ಭದ್ರತೆ ತೆಗೆದುಕೊಳ್ಳುತ್ತಿವೆ. ಆದರೆ, ರೈತ ಸರ್ಕಾರ ನೀಡುತ್ತಿರುವ ರು. ಲಕ್ಷ ಪಡೆಯುವಾಗ ಯಾವುದೇ ಭದ್ರತೆ ಇಟ್ಟಿರುವುದಿಲ್ಲ ಎಂದರು.
ಅನುಕಂಪ ಸಾಲದು: ರೈತರ ಬಗ್ಗೆ ಕೇವಲ ಅನುಂಕಪ ಸಾಲದು. ರೈತರ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು. ರೈತರಿಗೆ ವೃತ್ತಿಪರತೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂಥ ನೀತಿಗಳು ಅತಿ ಆವಶ್ಯಕವಾಗಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಕೃಷಿ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ಆಂತಕ ವ್ಯಕ್ತಪಡಿಸಿದರು. ರೈತರ ರು. 1.17 ಲಕ್ಷ ಸಾವಿರ ಕೋಟಿ ಬಜೆಟ್‌ನಲ್ಲಿ ಅಧಿಕಾರಿ ವರ್ಗ ಹಾಗೂ ನೌಕರರ ಸಂಬಳಕ್ಕಾಗಿ ರು. 71 ಸಾವಿರ ಕೋಟಿ ಖರ್ಚಾಗಿದೆ. ಪ್ರತಿಯೊಬ್ಬ ರೈತ 5 ವರ್ಷದ ಅವಧಿಯಲ್ಲಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ರು. 1.20 ಲಕ್ಷ ಸಂದಾಯ ಮಾಡುತ್ತಿದ್ದಾರೆ. ಆದಾಗ್ಯೂ, ರೈತರು ಮತ್ತೊಬ್ಬರ ಮುಂದೆ ಕೈಚಾಚಿ ನಿಲ್ಲಬೇಕಾದ ಪರಿಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು. ರೈತ ಸಂಘಟನೆಗಳು ಕೇವಲ ಚಳವಳಿ ಹಾಗೂ ಹೋರಾಟಗಳಲ್ಲಿ ತೊಡಗಿಸಿಕೊಂಡರೆ ಸಾಲದು. ರಾಜಕೀಯ ಜ್ಞಾನ ಹೊಂದುವುದು ಅತಿ ಆವಶ್ಯಕವಾಗಿದೆ. ಇದಕ್ಕಾಗಿ ರೈತ ಸಂಘಟನೆಯನ್ನು ರಾಜಕೀಯ ಪಕ್ಷವನ್ನಾಗಿ ಬೆಳೆಸಬೇಕೆಂದು ಸಲಹೆ ನೀಡಿದರು. ರೈತರ ಮೇಲಿನ ದೌರ್ಜನ್ಯ ತಡೆಯಲು ರೈತರು ಒಗ್ಗಟ್ಟಾಗುವುದು ಆವಶ್ಯಕವಾಗಿದೆ. ರೈತ ಸಮುದಾಯ ಬಹುಸಂಖ್ಯಾತವಾಗಿದೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದರೆ ರೈತ ಮುಖಂಡರು ಹೆಚ್ಚೆಚ್ಚು ವಿಧಾನಸೌಧ ಪ್ರವೇಶಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕೆಂದರು.
ರೈತ ಪರ ತುಡಿತ: ರೈತರ ಸಮಗ್ರ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕವಾಗಿ ತುಡಿತ ಹೊಂದಿರುವವರು ರಾಜಕೀಯಕ್ಕೆ ಬರಬೇಕು. ಮುಂಬರುವ ಚುನಾವಣೆಯಲ್ಲಿ ಜಾತಿ, ಹಣ ಕೆಲಸ ಮಾಡುವುದಿಲ್ಲ. ಆಗ ಏನಿದ್ದರೂ, ನೀತಿ ಕೆಲಸ ಮಾಡಲಿದೆ. ಅದಕ್ಕಾಗಿ ರೈತ ಸಂಘಟನೆಗಳ ಮುಖಂಡರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು. ರೈತರ ಪರವಾಗಿ ತಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದ ಪುಟ್ಟಣ್ಣಯ್ಯ, ರೈತರ ಸಮಗ್ರ ಅಭಿವೃದ್ಧಿ ಜಾರಿಗೆ ಬರಲೇಬೇಕಾದ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೇಳ್ಳೇರ್, ರಸಗೊಬ್ಬರಕ್ಕಾಗಿ ನಡೆದ ಹೋರಾಟದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ರೈತರಿಗೆ ಪರಿಹಾರ ನೀಡಿದಂತೆಯೇ, ಈ ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಸೋಮಗುದ್ದಿ ರಂಗಸ್ವಾಮಿ, ಬರಗಾಲ ಹಾಗೂ ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವಾಗ 224 ಶಾಸಕರ ಪೈಕಿ ಒಬ್ಬರೇ ಒಬ್ಬರು ರೈತರ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತಲಿಲ್ಲ. ಆ ಸಂದರ್ಭದಲ್ಲಿ ರೈತರ ಪರವಾಗಿ ಮಾತನಾಡಿದ್ದೇ ಪುಟ್ಟಣ್ಣಯ್ಯ ಎಂದರು. ಮಾಜಿ ಶಾಸಕ ಬಿ.ಸಿ. ಪಾಟೀಲ, ರೈತರ ಮುಖಂಡರಾದ ರವಿಕುಮಾರ ಬಲ್ಲೂರ್, ಜಿ.ಎ. ಹಿರೇಮಠ, ಶಿವಬಲಪ್ಪ ಗೋವಿ, ಗಂಗಣ್ಣ ಯಲಿ, ಬಸನಗೌಡ ಗಂಗಪ್ಪನವರ, ಎಸ್.ವಿ. ಚಪ್ಪರದಹಳ್ಳಿ, ಗಂಗನಗೌಡ ಮುದಿಗೌಡ್ರ, ಮಂಜು ತೋಟದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement