ಅಕ್ರಮ ಸಾರಾಯಿ ಮಾರಾಟ ತಡೆಯಿರಿ
ಹಾನಗಲ್ಲ: ಅಕ್ರಮ ಸಾರಾಯಿ ಮಾರಾಟ ತಡೆಯುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.
ಜಯ ಕರ್ನಾಟಕ ಸಂಘಟನೆ ಹಾನಗಲ್ಲ ಘಟಕ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಹಾನಗಲ್ಲ ತಾಲೂಕಾದ್ಯಂತ ಅಕ್ರಮ ಸಾರಾಯಿ ಮಾರಾಟ ಅವ್ಯಾಹತವಾಗಿ ಸಾಗಿದ್ದು, ಯಾವ ಸರ್ಕಾರ ಬಂದರೂ ಈ ಅಕ್ರಮ ತಡೆಗಟ್ಟಲು ಸಾಧ್ಯವಾಗಿಲ್ಲ. ಅಬಕಾರಿ ಅಧಿಕಾರಿಗಳು ಇದನ್ನು ತಡೆಗಟ್ಟಲು ಧೈರ್ಯ ತೋರುತ್ತಿಲ್ಲ. ಬಾರ್ ಅಂಗಡಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸಮಯ ಪಾಲನೆ ಇಲ್ಲದೆ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಬಾರ್‌ಗಳಲ್ಲಿ ಕೇವಲ ಮಾರಾಟ ಮಾಡುವ ಹಕ್ಕಿದ್ದು, ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದಾರೆ.
ಇದೆಲ್ಲ ಗೊತ್ತಿದ್ದೂ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಏನೂ ಗೊತ್ತಿಲ್ಲದಂತೆ ಜಾಣಕುರುಡು ನೀತಿ ಅನುಸರಿಸುತ್ತಿವೆ. ಮಹಿಳಾ ಸಂಘಟನೆಗಳು ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ ಮಾಡಿದಾಗ ಮಾತ್ರ ನೆಪಕ್ಕೋಸ್ಕರ ಹಳ್ಳಿಗಳಿಗೆ ದಾಳಿ ಮಾಡುತ್ತಾರೆ. ಹಳ್ಳಿಗಳಲ್ಲೂ ಸಾರಾಯಿ ಮಾರಾಟ ಅವ್ಯಾಹತವಾಗಿ ನಡೆದಿದೆ. ಇದರಿಂದ ಬಡ ಕೂಲಿಕಾರರು, ರೈತರು ಹಾಳಾಗುತ್ತಿದ್ದಾರೆ. ಇದು ಮಹಿಳೆಯರ, ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವ ಮೂಲಕ ಸಾರಾಯಿ ಮಾರಾಟ ನಿಷೇಧಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಸಾರಾಯಿ ಮಾರಾಟ ತಹಬಂದಿಗೆ ತರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ತಾಲೂಕು ಅಧ್ಯಕ್ಷ ರಾಮು ಯಳ್ಳೂರ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಶ್ರೀಕಾಂತ ಕೊಂಚಿಗೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವು ಹನುಮಣ್ಣನವರ, ಉಪಾಧ್ಯಕ್ಷ ಷಣ್ಮುಖ ಜೂಜಗಾಂವ, ಉಮೇಶ ಮಾಳಗಿ, ಸಮೀರ್ ಬಾಳೂರ, ಮಾಲತೇಶ ತಳವಾರ, ಮಾಲತೇಶ ಮಾಳಿ, ಶಿವನಾಗಪ್ಪ ಯಲಿಗಾರ, ಜಗದೀಶ ದೊಡ್ಡಮನಿ, ಸಂದೀಪ ಹುಲಗೂರ, ಶ್ರೀನಿವಾಸ ಕಮ್ಮಾರ, ರಮೇಶ ಕಡಗದ, ನಾಗರಾಜ ಈಳಿಗೇರ, ಶಂಕ್ರಣ್ಣ ಕಾನಣ್ಣನವರ, ಸುಲೇಮಾನ ಮೀಠಾಯಿಗಾರ, ವೀರಯ್ಯಾ ಹಿರೇಮಠ, ಗದಿಗೆಪ್ಪ ಮಾಯನಮರದ ಮುಂತಾದವರು ಇದ್ದರು.