ಅಗ್ರೋ ಕೇಂದ್ರದ ಮೇಲೆ ದಾಳಿ: ಬೀಗ
ರಾಣಿಬೆನ್ನೂರು: ಬೀಟಿ ಹತ್ತಿ ಪ್ಯಾಕೆಟ್ಗಳನ್ನು ರಸೀದಿಯಿಲ್ಲದೆ ದಾಸ್ತಾನು ಮಾಡಿ ಬೀಜ ನಿಯಂತ್ರಣದ ಸರ್ಕಾರಿ ಆದೇಶ ಉಲ್ಲಂಘಿಸಿದ ನಗರದ ನಂದಿ ಹೈಬ್ರೀಡ್ ಸಿಡ್ಸ್ ಅಗ್ರೋ ಕೇಂದ್ರದ ಮೇಲೆ ಸೋಮವಾರ ಸಂಜೆ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ ಸಹಾಯಕ ಕೃಷಿ ನಿರ್ದೇಶಕರು ಅಗ್ರೋ ಕೇಂದ್ರಕ್ಕೆ ಬೀಗ ಜಡಿದು ಸೀಲ್ ಮಾಡಿದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕ ನಾಗನಗೌಡ ಪಾಟೀಲ, ನೋಂದಣಿ ದೃಢೀಕೃತ ಪತ್ರವನ್ನು ನವೀಕರಿಸದೇ ಅಗ್ರೋ ಕೇಂದ್ರದಲ್ಲಿ ಬೀಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಪ್ರತಿ ದಿನವೂ ಬೀಜಗಳ ದಾಸ್ತಾನುಗಳ ಪ್ರಾರಂಭ ಮತ್ತು ಮುಕ್ತಾಯದ ಶಿಲ್ಕುಗಳ ಕುರಿತು ದಾಖಲಿಸದಿರುವುದು ಹಾಗೂ ಬೀಜಗಳ ದರಪಟ್ಟಿ ಪ್ರದರ್ಶಿಸದಿರುವುದು ದಾಳಿ ವೇಳೆ ಕಂಡು ಬಂದಿದೆ. ಆದ್ದರಿಂದ ಅಗ್ರೋ ಕೇಂದ್ರದ ಮಾಲೀಕ ಬಸವರಾಜ ಕಡ್ಲಿಗೊಂದಿ ಅವರಿಗೆ ಕಾರಣ ಕೇಳಿ ನೋಟಿಸು ನೀಡಲಾಗಿದೆ ಎಂದು ತಿಳಿಸಿದರು. ದಾಳಿಯಲ್ಲಿ ಸಹಾಯಕ ಕೃಷಿ ಅಧಿಕಾರಿ ಜಿ.ಎಂ. ಬತ್ತಿಕೊಪ್ಪ, ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ ಪಾಲ್ಗೊಂಡಿದ್ದರು.