ಕಾರ್ಯಕ್ರಮ ಅನುಷ್ಠಾನಕ್ಕೆ ಪ್ರಾಮಾಣಿಕ ಯತ್ನ
ರಾಣಿಬೆನ್ನೂರು: ರಾಜ್ಯದ ಗ್ರಾಮಾಂತರ ಪ್ರದೇಶಗಳ ಹಾಗೂ ಮಾನವ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸಾಕ್ಷರ ಭಾರತ್ ಯೋಜನೆ ಅಡಿಯಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಾಲೂಕು ಸಾಕ್ಷರತಾ ಸಮಿತಿ ನೂತನ ಸಂಯೋಜಕ ಆರ್.ಡಿ. ಹೊಂಬರಡಿ ಹೇಳಿದರು.
ಈ ಹಿಂದೆ ತಾಲೂಕು ಸಂಯೋಜಕರಾಗಿದ್ದ ಎನ್.ಎಚ್. ಕರೆಗೌಡರವರು ತಾಲೂಕಿನ ಮಾಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ತೆರಳಿದ್ದ ಕಾರಣ ತೆರವಾಗಿದ್ದ ಸಂಯೋಜಕರ ಹುದ್ದೆಗೆ ನೇಮಕಗೊಂಡ ನಂತರ ಮಂಗಳವಾರ ಅಧಿಕಾರ ವಹಿಸಿಕೊಂಡು ಮಾತನಾಡಿದರು.
ಸೇವಾನುಭವ ಬಳಕೆ: 10 ವರ್ಷಗಳ ಹಿಂದೆ ಗ್ರಾಮಾಂತರ ಪ್ರದೇಶದ ಜನರನ್ನು ಹಾಗೂ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಪಂಚಾಯಿತಿಸಂಯೋಜಕರಾಗಿ, ಮಂಡಳ ಸಂಚಾಲಕರಾಗಿ ಹಲವಾರು ಬೀದಿ ನಾಟಕಗಳ ಮುಖಾಂತರ ಸಾರ್ವಜನಿಕರು ಮತ್ತು ಅನಕ್ಷರಸ್ಥರಲ್ಲಿ ಸಾಕ್ಷರತೆಯ ಮಹತ್ವದ ಕುರಿತು ಅರಿವು ಮೂಡಿಸಿರುವ ಅನುಭವ ನನಗಿದೆ ಎಂದರು.
ಪ್ರಾಮಾಣಿಕ ಕಾರ್ಯ: 10 ವರ್ಷಗಳ ಕಾಲ ಈ ಕಾರ್ಯಕ್ರಮದ ಬಗ್ಗೆ ಅರಿವಿರುವ ತಮ್ಮನ್ನು ತೆರವಾಗಿರುವ ತಾಲೂಕು ಸಾಕ್ಷರತಾ ಸಂಯೋಜಕರನ್ನಾಗಿ ಆಯ್ಕೆ ಮಾಡಿರುವ ಸಮಿತಿಯ ಅಧ್ಯಕ್ಷರು, ಗೌರವಾಧ್ಯಕ್ಷರಿಗೆ ಹಾಗೂ ಸಮಿತಿ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರಿಗೆ ಅಭಿನಂದಿಸಿದರು. ತಾಲೂಕು ಸಾಕ್ಷರ ಸೌರಭ ಸಮಿತಿ ವ್ಯಾಪ್ತಿಗೊಳಪಟ್ಟಿರುವ 35 ಗ್ರಾಪಂ ವ್ಯಾಪ್ತಿಗೊಳಪಟ್ಟಿರುವ ಎಲ್ಲಾ ಗ್ರಾಮಗಳಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಸಾಕ್ಷರ ಮಿಷನ್ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇನೆ, ಪ್ರಗತಿಯಲ್ಲಿ ಹೆಚ್ಚಳವಾಗುವಂತೆ ಹಾಗೂ ಮಾನವ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ ಎಂದರು.
25ರಿಂದ ತರಬೇತಿ: ತಾಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿರುವ 35 ಗ್ರಾಮ ಪಂಚಾಯಿತಿಗಳಲ್ಲಿ ತಾಲೂಕು ಸಾಕ್ಷರ ಸೌರಭ ಸಮಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಪಂ ಸಂಯೋಜಕರಿಗೆ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಪ್ರಧಾನ ಗುರುಗಳಿಗೆ ಜೂನ್ 25ರಿಂದ 27ರ ವರೆಗೆ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಆಶ್ರಯದಲ್ಲಿ ಮೂಲ ಸಾಕ್ಷರತೆಯ 2ನೇ ಹಂತದ ಕಲಿಕೆ ಕುರಿತು ಮುಖ್ಯ ತರಬೇತಿದಾರರಿಗೆ ಹಾಗೂ ಪ್ರೇರಕ ಸಹ ಪ್ರೇರಕರಿಗೆ ತರಬೇತಿ ಏರ್ಪಡಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರೇರಕರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಮೊ: 9880920564ಗೆ ಸಂಪರ್ಕಿಸಬೇಕೆಂದು ಆರ್.ಡಿ. ಹೊಂಬರಡಿ ತಿಳಿಸಿದರು.
ತಾಲೂಕಿನ ಮಾಕನೂರು ಗ್ರಾಮ ಪಂಚಾಯಿತಿ ಮುಖ್ಯ ತರಬೇತುದಾರ ಹನುಮಂತಪ್ಪ ಸಾರಥಿ, ರಾಹುತನಕಟ್ಟಿಯ ಪರಶುರಾಮ ಬಣಕಾರ, ಬಸವರಾಜ ಕೂಳಜಿ, ವಿರಯ್ಯ ಹನಗೂಡಿಮಠ, ಬಸವರಾಜ ಇದ್ದರು.