ಪರಿಸರ ಬೆಳವಣಿಗೆಗೆ ಸಹಕರಿಸಿ: ಬಿ.ಪಿ. ಹಳ್ಳೇರ
ಹಿರೇಕೆರೂರು: ಪರಿಸರ ಸಂರಕ್ಷಣೆಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದ್ದು, ಎಲ್ಲರೂ ಪ್ರತಿ ವರ್ಷ ತಮ್ಮ ವಿಶೇಷ ದಿನಗಳಲ್ಲಿ ಸಸಿ ನೆಡುವ ಮೂಲಕ ಉತ್ತಮ ಪರಿಸರ ಬೆಳವಣಿಗೆಗೆ ಸಹಕರಿಸಬೇಕು ಎಂದು ಸಂಸ್ಥೆಯ ಪ್ರಾಚಾರ್ಯ ಬಿ.ಪಿ. ಹಳ್ಳೇರ ತಿಳಿಸಿದರು.
ಪಟ್ಟಣದ ತರಳಬಾಳು ಜಗದ್ಗುರು ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಸಂಘ ಉದ್ಘಾಟಿಸಲಾಯಿತು.
ಉಪನ್ಯಾಸಕ ದಾನೇಶ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಪರಿಸರ ಸಂಘದಡಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿ ಹೇಳಿದರು.
ಉಪನ್ಯಾಸಕ ಕೆ.ಎಂ. ಮರಡಿಬಣಕಾರ ಮಾತನಾಡಿ, ಮಾನವನ ನಿರ್ಲಕ್ಷತನದಿಂದ ಪರಿಸರ ನಾಶವಾಗುತ್ತಿದೆ. ಇದರಿಂದ ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿದೆ. ಆದ್ದರಿಂದ ಮುಂದೆ ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಳ್ಳುವ ಪ್ರಶಿಕ್ಷಣಾರ್ಥಿಗಳು ಮಕ್ಕಳಲ್ಲಿ ಹಾಗೂ ಸಮಾಜಕ್ಕೆ ಪರಿಸರ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಶಿಕ್ಷಣ ಸಂಸ್ಥೆ ಉಪನ್ಯಾಸಕ ಸತೀಶ ಬಣಕಾರ ಪ್ರಾಸ್ತಾವಿಕ ಮಾತನಾಡಿ, ಪರಿಸರ ಸಂಘದಡಿಯಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರ ಸಂಘದ ಉದ್ದೇಶಗಳು, ಸಂಘದಡಿಯಲ್ಲಿ ಕೈಗೊಳ್ಳುವ ಪರಿಸರ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಶಿಕ್ಷಣಾರ್ಥಿಗಳು ಪರಿಸರ ಜಾಗೃತಿ ಕಿರು ನಾಟಕಗಳನ್ನು ಪ್ರದರ್ಶಿಸಿದರು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಅತಿಥಿಗಳಿಗೆ ಸಸಿ ನೆಡುವುದರ ಮೂಲಕ ಸನ್ಮಾನಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಮತಾ ಕೆ.ವಿ, ಚನ್ನಬಸವ ಎ, ಎಂ.ಎಚ್. ಬೆಟ್ಟಳ್ಳಿ, ಟಿ. ವೆಂಕಟೇಶ ಉಪಸ್ಥಿತರಿದ್ದರು. ನಿಂಪಾ ದನವಿನವರ ಸ್ವಾಗತಿಸಿದರು. ನಳಿನಾ ವಾಲಿ ನಿರೂಪಿಸಿದರು.