ಹವಾಮಾನ ಆಧಾರಿತ ಕೃಷಿ ಮಾಡಿ
ಹಾನಗಲ್ಲ: ಮಳೆ ಹಾಗೂ ಕೃಷಿಗೆ ಅನುಕೂಲಕರವಾದ ವಾತಾವರಣವನ್ನಾಧರಿಸಿ ಯೋಗ್ಯ ಫಸಲು ಹಾಗೂ ತಳಿಗಳನ್ನು ಬಳಸಿ ಕೃಷಿ ಮಾಡುವ ಅಗತ್ಯವಿದ್ದು, ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಜಿ.ಡಿ. ಪೊಲೀಸ್ ಪಾಟೀಲ ತಿಳಿಸಿದರು.
ತಾಲೂಕಿನ ಬೆಳಗಾಲಪೇಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನಡೆದ 'ಪುಷ್ಪಕೃಷಿ' ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪದಿಂದ ಸಕಾಲಕ್ಕೆ ಮಳೆಯಾಗದೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ರೈತ ಸಮುದಾಯ ಆಹಾರ ಉತ್ಪನ್ನಗಳ ಜತೆಗೆ ಪುಷ್ಪ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಕೇವಲ ಅರ್ಧ ಎಕರೆ ಪ್ರದೇಶದಲ್ಲಿ ಗುಲಾಬಿ ನಾಟಿ ಮಾಡಿ ಪ್ರತಿ ತಿಂಗಳಿಗೆ ರು. 25 ಸಾವಿರಕ್ಕೂ ಅಧಿಕ ಹಣ ಗಳಿಸಬಹುದಾಗಿದೆ.
ಗುಲಾಬಿಯೊಂದಿಗೆ ಸುಗಂಧರಾಜ, ಸೇವಂತಿಗೆ, ಚಂಡುಹೂವು, ಮಲ್ಲಿಗೆ ಕೃಷಿಯಲ್ಲಿ ತೊಡಗಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಬೇಸಾಯಕ್ಕೆ ಆಸಕ್ತಿ: ತೋಟಗಾರಿಕೆ ಅಧಿಕಾರಿ ಸಿ. ರಾಮಸ್ವಾಮಿ, ಗುಲಾಬಿ ಹೂವು ಸುಗಂಧ ದ್ರವ್ಯ ತಯಾರಿಕೆಗೆ ಬಳಸಲಾಗುತ್ತಿರುವುದರಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಇದೆ. ಇದನ್ನು ಕಾಳಜಿಯಿಂದ ಬೆಳೆಯಬೇಕಲ್ಲದೆ ತಂಪಾದ ಒಣ ಹವೆ ಇರುವ ಪ್ರದೇಶದಲ್ಲಿ ಗುಲಾಬಿ ಅತ್ಯತ್ತಮವಾಗಿ ಬೆಳೆಯಬಲ್ಲದು. ಈ ಕೃಷಿ ಮೂಲಕ ಹಲವು ರೈತರು ದೊಡ್ಡ ಮೊತ್ತದ ಲಾಭ ಪೆಡೆದಿರುವ ಉದಾಹರಣೆಗಳು ರಾಜ್ಯಾದ್ಯಂತ ಇವೆ.
ಹಾನಗಲ್ಲ ತಾಲೂಕಿನಲ್ಲಿಯೂ ಈಗ ಗುಲಾಬಿ ಬೇಸಾಯಕ್ಕೆ ಹೆಚ್ಚು ಆಸಕ್ತಿ ಮೂಡುತ್ತಿದ್ದು, ಹೆಚ್ಚು ರೈತರು ಬೆಳೆಯುವ ಮೂಲಕ ಉತ್ತಮ ಮಾರುಕಟ್ಟೆ ಸೌಲಭ್ಯವೂ ಸಿಗುವುದು ಸಾಧ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರಸ್ವತಿ ಸ್ವಾಗತಿಸಿದರು. ಮೇಲ್ವಿಚಾರಕ ನಿಜಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಪ್ರಭಾವತಿ ವಂದಿಸಿದರು.