ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಸ್ಥಗಿತ

Vishwanath S
Updated On : 12 Jun 2013, 11:01 am

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 11
ಗುತ್ತಿಗೆ ಕಂಪನಿ ನಿರಾಸಕ್ತಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆಗಸ್ಟ್ ತಿಂಗಳ ಅವಧಿಯಲ್ಲಿ ಹೈಟೆಕ್ ಬಸ್ ನಿಲ್ದಾಣವಾಗಿ ಮಾರ್ಪಡಬೇಕಿದ್ದ ಹಾವೇರಿ ಬಸ್ ನಿಲ್ದಾಣದ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿದೆ.
ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಆರಂಭಗೊಂಡು 2 ವರ್ಷಗಳೇ ಗತಿಸುತ್ತ ಬಂದರೂ, ಈವರೆಗೆ ಶೇ. 30ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಅಲ್ಲದೆ, ಇದೀಗ ಕಾಮಗಾರಿಯೇ ಸ್ಥಗಿತಗೊಂಡಿದೆ.
ಇದರಿಂದಾಗಿ ನಿತ್ಯ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ನಿಲ್ದಾಣದ ತುಂಬೆಲ್ಲ ಅವ್ಯವಸ್ಥೆ ತಾಂಡವಾಡುತ್ತಿರುವುದರಿಂದ ನಿತ್ಯವೂ ಹಾವೇರಿಗೆ ಆಗಮಿಸುವ ಜನತೆ ಬಸ್ ಯಾಕಾದರೂ ನಿಲ್ದಾಣದೊಳಗೆ ಪ್ರವೇಶಿಸುತ್ತದೆಯೋ ಎಂದು ಮುಜುಗರಪಟ್ಟುಕೊಳ್ಳುವಂತಾಗಿದೆ.
ಕಾಮಗಾರಿ ಅರ್ಧಕ್ಕೆ ಬಿಟ್ಟು ಪಲಾಯನಗೈದಿರುವ ಗುತ್ತಿಗೆ ಕಂಪನಿಗೆ ಕೆಎಸ್‌ಆರ್‌ಟಿಸಿ ಸಂಸ್ಥೆ ದಂಡವೇನೋ ವಿಧಿಸಿದೆ ನಿಜ. ಆದರೆ, ಈ ಕ್ರಮ ಪ್ರಯಾಣಿಕರ ಪಾಲಿಗೆ ಯಾವುದೇ ರೀತಿ ಅನುಕೂಲ ಮಾಡಿಕೊಟ್ಟಿಲ್ಲ. ಈಗ ಕಾಮಗಾರಿಯನ್ನು ಮತ್ತೆ ಹೊಸದಾಗಿ ಆರಂಭಿಸಬೇಕಾಗಿದ್ದು, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಬೇಕಾದರೆ ಕನಿಷ್ಠ ಒಂದೂವರೆಯಿಂದ ಎರಡು ವರ್ಷ ಕಾಲಾವಧಿ ಬೇಕಾಗುತ್ತದೆ.
ರು. 6 ಕೋಟಿ ವೆಚ್ಚದಲ್ಲಿ:  ರು. 6 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲು ಕೆಎಸ್‌ಆರ್‌ಟಿಸಿ ಸಂಸ್ಥೆ, ಬೆಂಗಳೂರು ಮೂಲದ ಶ್ರೀದೇವಿ ಕನ್‌ಸ್ಟ್ರಕ್ಷನ್ ಎಂಬ ಕಂಪನಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ನೀಡುವ ಸಂದರ್ಭ ಪ್ರತಿ ತಿಂಗಳು ರು. 30 ಲಕ್ಷದ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಷರತ್ತನ್ನು ವಿಧಿಸಿತ್ತು. ಆದಾಗ್ಯೂ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಕನ್‌ಸ್ಟ್ರಕ್ಷನ್ ಕಂಪನಿ ಒಂದು ವರ್ಷದ ಅವಧಿಯಲ್ಲಿ ರು. 30 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸಿದೆ. ಈ ವಿಳಂಬ ನೀತಿಗೆ ಕೆಎಸ್‌ಆರ್‌ಟಿಸಿ ಗುತ್ತಿಗೆ ಕಂಪನಿಗೆ ರು. 23 ಲಕ್ಷ ದಂಡ ವಿಧಿಸಿದೆ ನಿಜ. ಆದರೆ, ಸದ್ಯ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆಯಿಂದ ಪರದಾಡುತ್ತಿರುವವರು ಮಾತ್ರ ಜನತೆ.
ಸ್ಥಗಿತಗೊಂಡ ಕಾಮಗಾರಿ: ಕಾಮಗಾರಿ ಪೂರ್ಣಗೊಳಿಸುವಲ್ಲಿ ಗುತ್ತಿಗೆ ಕಂಪನಿ ತೋರಿಸುತ್ತಿರುವ ಅನಾದರ ಕುರಿತಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅನೇಕ ಬಾರಿ ಗುತ್ತಿಗೆ ಕಂಪನಿ ವಿರುದ್ಧ ನೋಟಿಸ್ ಜಾರಿ ಮಾಡಿದ್ದರು. ಆದರೆ, ಗುತ್ತಿಗೆ ಕಂಪನಿ ಯಾವುದಕ್ಕೂ ಕ್ಯಾರೆ ಎಂದಿರಲಿಲ್ಲ. ಗುತ್ತಿಗೆ ಕಂಪನಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಇಷ್ಟೊಂದು ನಿರಾಸಕ್ತಿ ತೋರುತ್ತಿದ್ದರೂ 2 ವರ್ಷ ಕಾಲ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅವರನ್ನು ಸಹಿಸಿಕೊಂಡು ಬರಲು ಕಾರಣವಾದರೂ ಏನು ಎಂಬ ಮಾತುಗಳು ಜಿಲ್ಲಾದ್ಯಂತ ಕೇಳಿಬರಲಾರಂಭಿಸಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ. ನೋಟಿಸ್‌ಗೂ ಗುತ್ತಿಗೆ ಕಂಪನಿ ಜಗ್ಗದಿರುವುದರಿಂದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಗುತ್ತಿಗೆ ಕಂಪನಿಗೆ ನೀಡಿದ್ದ ಕಾಮಗಾರಿಯಿಂದ 29-4-2013ರಂದು ತೆಗೆದು ಹಾಕಿ ಆದೇಶ ಹೊರಡಿಸಿದರು. ಅಲ್ಲಿಂದ ಈವರೆಗೂ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಸ್ಥಗಿತಗೊಂಡಿದೆ.
ಯಾವ್ಯಾವ ಸೌಲಭ್ಯ: ಹೈಟೆಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದು ಸ್ವಾಗತಾರ್ಹವಾದರೂ, ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಈಗಾಗಲೇ ಗುತ್ತಿಗೆ ಪಡೆದಿದ್ದ ಕಂಪನಿ ವಿರುದ್ಧ ಸಂಸ್ಥೆ ಮೃದು ಧೋರಣೆ ತಾಳಿದ್ದು ಹತ್ತು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಹೈಟೆಕ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಶ್ರಾಂತಿ ಕೋಣೆ, ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಅಲ್ಲದೆ, ದೂರದ ಊರುಗಳಿಂದ ನಡುರಾತ್ರಿ ಹಾವೇರಿಗೆ ಬಂದಿಳಿಯುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲೇ ವಸತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಊಟದ ಕ್ಯಾಂಟಿನ್ ಹಾಗೂ ಅಲ್ಪೋಪಹಾರ ಕೇಂದ್ರಗಳನ್ನು ಇದರಲ್ಲಿ ಕೂಡಿವೆ. ಸಂಸ್ಥೆಗೆ ಆದಾಯ ತಂದುಕೊಡುವ ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಮರು ಟೆಂಡರ್
ಹಾಡಿದ್ದು ಹಾಡೋ ಕಿಸಬಾಯಿ ದಾಸಾ ಎಂಬಂತೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಂಸ್ಥೆಯವರು ಮತ್ತೊಮ್ಮೆ ಯೋಜನೆ ರೂಪಿಸಬೇಕಿದೆ. ಅಲ್ಲದೆ ಮತ್ತೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಬೇಕಿದೆ. ಕಾಮಗಾರಿ ಶೀಫ್ರ ಆರಂಭಗೊಳ್ಳಬೇಕೆಂಬ ಪ್ರಾಮಾಣಿಕ ತುಡಿತ ಸಂಸ್ಥೆ ಅಧಿಕಾರಿಗಳಲ್ಲಿ ಇದ್ದಲ್ಲಿ, ಉಳಿದಿರುವ ಕಾಮಗಾರಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ನೀಲನಕ್ಷೆ ತಯಾರಿಸಬೇಕಾಗುತ್ತದೆ. ಮತ್ತೆ ಟೆಂಡರ್ ಕೈಗೊಳ್ಳಬೇಕಾಗುತ್ತದೆ.
ಒಂದೂವರೆ ವರ್ಷ
ಹೊಸ ಕಂಪನಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಮುಂದೆ ಬಂದರೂ, ಈ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೂ ಪ್ರಯಾಣಿಕರ ಪಡಿಪಾಟಲು ಹೇಳತೀರದಾಗಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಬಸ್ ನಿಲ್ದಾಣದ ಹಿಂಭಾಗದಲ್ಲೇ ಸಂಸ್ಥೆ ತಾತ್ಕಾಲಿಕ ಬಸ್ ನಿಲ್ದಾಣ ಆರಂಭಿಸಿದೆಯಾದರೂ ಅಲ್ಲಿ ಮೂಲಸೌಕರ್ಯಗಳಿಲ್ಲದೆ ಮಹಿಳೆಯರು ಹಾಗೂ ವಯೋವೃದ್ಧರು ನಿತ್ಯವೂ ಸಂಸ್ಥೆಯ ಉದಾಸೀನತೆಗೆ ಹಿಡಿಶಾಪ ಹಾಕುತ್ತಿದ್ದಾರೆ.


-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement