ವಿವಿಧ ಬೇಡಿಕೆ ಈಡೇರಿಕೆಗೆ ಎಸ್ಎಫ್ಐ ಆಗ್ರಹ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜೂ. 12
2008ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಶಿಕ್ಷಣವನ್ನು ವ್ಯಾಪಾರೀಕರಣ, ಖಾಸಗೀಕರಣ, ಕೇಸರೀಕರಣಗೊಳಿಸಿ ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ತಳ್ಳಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೇಲೆ ವಿದ್ಯಾರ್ಥಿಗಳು-ಯುವಜನರು ಅನೇಕ ನಿರೀಕ್ಷೆಗಳನ್ನಿಟುಕೊಂಡಿದ್ದು, ಹಿಂದಿನ ಸರ್ಕಾರ ಅನುಸರಿಸಿದ ತಪ್ಪು ನೀತಿಗಳನ್ನು ಬದಲಾಯಿಸಿ ವಿದ್ಯಾರ್ಥಿ-ಶಿಕ್ಷಕರ ಪರವಾದ ನೀತಿಗಳನ್ನು ಜಾರಿಗೊಳಿಸಿ ಶಿಕ್ಷಣ ಕ್ಷೇತ್ರ ಶುದ್ಧೀಕರಿಸಬೇಕೆಂದು ಎಸ್ಎಫ್ಐ ತಾಲೂಕು ಸಮಿತಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿದೆ.
ವಿವಿಧ ಬೇಡಿಕೆಗಳು
ಆರ್ಟಿಇ: ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) 2009ನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವ ಬದಲಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ಹಿಂದಿನ ಸರ್ಕಾರ ನಿಯಮಗಳನ್ನು ರೂಪಿಸಿತ್ತು. ಕಾಯ್ದೆಯ ಪ್ರಕಾರ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೂ ಖಾಸಗಿ ಶಾಲೆಗಳಲ್ಲಿ 25ರಷ್ಟು ಮಕ್ಕಳಿಗೆ (ಸಾಮಾಜಿಕ, ಆರ್ಥಿಕವಾಗಿ ದುರ್ಬಲವಿರುವವರಿಗೆ) ಪ್ರವೇಶ ನೀಡಲು ಇನ್ನಷ್ಟು ಶುಲ್ಕ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿಯದೇ, ಶುಲ್ಕ ಹೆಚ್ಚಳ ಮಾಡಬಾರದು. ಆರ್ಟಿಇ ಅಡಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ನೀಡಬೇಕು ಎಂದರು.
ಡೊನೇಷನ್: ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಬೆಳೆದಿವೆ. ಸರ್ವರಿಗೂ ಶಿಕ್ಷಣ ನೀಡಬೇಕೆನ್ನುವ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಖಾಸಗಿ ಶಾಲೆಗಳು ದಲಿತ-ಹಿಂದುಳಿದ-ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನಿರಾಕರಿಸುತ್ತಿವೆ. ವಿದ್ಯಾರ್ಥಿ-ಪೋಷಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿವೆ. 1983ರ ಕರ್ನಾಟಕ ಶಿಕ್ಷಣ ಅಧಿನಿಯಮ ಪ್ರಕಾರ ಡೊನೇಷನ್ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಬೇಕೆಂಬ ನಿಯಮವಿದ್ದರೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಇದ್ದರೂ ಕ್ರಿಯಾಶೀಲವಾಗಿಲ್ಲ. ಆದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ತಡೆಗಟ್ಟಲು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಸರ್ಕಾರಿ ಶಾಲೆ ಮುಚ್ಚಬೇಡಿ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸಬೇಕಿದ್ದ ರಾಜ್ಯ ಸರ್ಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ರಾಜ್ಯದ 3,174 ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ಅಲ್ಲದೆ ಪ್ರೊ. ಗೋವಿಂದ ವರದಿ ಶಿಫಾರಸಿನಂತೆ 12,740 ಶಾಲೆಗಳನ್ನು ಮುಚ್ಚಲು ಹಿಂದಿನ ಬಿಜೆಪಿ ಸರ್ಕಾರ ಹುನ್ನಾರ ನಡೆಸಿತ್ತು. ಆದ್ದರಿಂದ ರಾಜ್ಯದ ಲಕ್ಷಾಂತರ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳು ಓದುತ್ತಿರುವ ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಮುಚ್ಚಿರುವ ಶಾಲೆಗಳನ್ನು ಮತ್ತೆ ತೆರೆಯಬೇಕು ಮತ್ತು ಅಗತ್ಯ ಮೂಲಸೌಲಭ್ಯ ನೀಡಬೇಕು.
ಮೂಲಸೌಕರ್ಯ: ರಾಜ್ಯದಲ್ಲಿ 38 ಸಾವಿರ ಶಿಕ್ಷಕರ ಹುದ್ದೆ ಮತ್ತು ಶೇ. 27ರಷ್ಟು ಕಾಲೇಜು ಹಾಗೂ ವಿವಿ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಶೇ. 68 ಫ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರ ಪ್ರತ್ಯೇಕ ಶೌಚಾಲಯಗಳಿಲ್ಲ. ಕುಡಿವ ನೀರು, ಗ್ರಂಥಾಲಯ, ಆಟದ ಮೈದಾನಗಳಿಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ. ರಾಜ್ಯದ 11 ಲಕ್ಷ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ಶಾಲೆ -ಕಾಲೇಜು, ವಿವಿ ಹಾಗೂ ಹಾಸ್ಟೆಲ್ಗಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಮುಂದಾಗಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಿಕ್ಷಕ-ಉಪನ್ಯಾಸಕ ಹಾಗೂ ಸಿಬ್ಬಂದಿ ನೇಮಿಸಬೇಕು.
ಶಿಕ್ಷಣ ಕೇಸರೀಕರಣ: ಹಿಂದಿನ ಬಿಜೆಪಿ ಸರ್ಕಾರ 5 ಮತ್ತು 8ನೇ ತರಗತಿಯ ಪಠ್ಯ ಪುಸ್ತಕಗಳ ಪರಿಷ್ಕರಣೆ ಹೆಸರಿನಲ್ಲಿ ಜಾತಿ ಪದ್ಧತಿ ಪುಷ್ಟಿಗೊಳಿಸುವ, ಧರ್ಮಾಂಧತೆ, ದ್ವೇಷ ಹುಟ್ಟಿಸುವ, ವೈದಿಕ ವ್ಯವಸ್ಥೆ ವೈಭವೀಕರಿಸುವ ಅನೇಕ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಿದೆ. ಶಾಲಾ ಮಕ್ಕಳ ಬೌದ್ಧಿಕ ಸಾಮರ್ಥ್ಯ ಲೆಕ್ಕಿಸದೇ ಹೊರೆಯಾಗಿರುವ, ಸುಳ್ಳು ಇತಿಹಾಸವಿರುವ ಪಠ್ಯಪುಸ್ತಕಗಳನ್ನು ರಚಿಸಲಾಗಿದೆ. ಕೇಸರೀಕರಣಗೊಂಡಿರುವ ಪಠ್ಯ ಮರುಪರಿಷ್ಕರಣೆ ಮಾಡಿ ಶಿಕ್ಷಣ ತಜ್ಞರು, ಸಾಹಿತಿ, ಚಿಂತಕರನ್ನೊಳಗೊಂಡ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.
ಖಾಸಗಿ ವಿವಿ ಸ್ಥಾಪನೆ ಕೈಬಿಡಿ: ರಾಜ್ಯದಲ್ಲಿ ಸರ್ಕಾರಿ ವಿವಿಗಳು ಮೂಲಸೌಕರ್ಯಗಳಿಲ್ಲದೇ ನರಳುತ್ತಿವೆ. ವಿವಿಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ಒದಗಿಸುವ ಬದಲು ಹಿಂದಿನ ಸರ್ಕಾರ 22 ಖಾಸಗಿ ವಿವಿಗಳಿಗೆ ಅನುಮತಿ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಡೀಮ್ಡ್ ವಿವಿಗಳಾಗಿ ಅಕ್ರಮಗಳನ್ನು ನಡೆಸಿ ಕಪ್ಪುಪಟ್ಟಿಗೆ ಸೇರಿದ್ದ ಶಿಕ್ಷಣ ಸಂಸ್ಥೆಗಳಿಗೆ ಈಗ ಖಾಸಗಿ ವಿವಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಕೇವಲ ಹಣ ಮಾಡುವ ಒಂದೇ ಉದ್ದೇಶ ಹೊಂದಿರುವ ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ವೃತ್ತಿ ಶಿಕ್ಷಣ: ರಾಜ್ಯದಲ್ಲಿ ವೃತ್ತಿ ಶಿಕ್ಷಣ ಅದರಲ್ಲೂ ಪ್ರಮುಖವಾಗಿ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಶಿಕ್ಷಣ ಮಾರಾಟದ ಸರಕಾಗಿದೆ. ಖಾಸಗಿ ಕಾಲೇಜುಗಳ ಪ್ರಾಬಲ್ಯ ಹೆಚ್ಚಾಗಿದ್ದು, ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿವೆ. ದನದಾಹಿ ಕಾಮೆಡ್-ಕೆ ಜತೆ ಶಾಮೀಲಾಗಿದ್ದ ಹಿಂದಿನ ಸರ್ಕಾರಗಳು ವ್ಯಾಪಕ ಶುಲ್ಕ ಏರಿಕೆಗೆ ಅವಕಾಶ ನೀಡಿ ವಿದ್ಯಾರ್ಥಿ, ಪೋಷಕರನ್ನು ಸುಲಿಗೆ ಮಾಡಲು ಮುಂದಾಗಿದ್ದವು. ನಿರಂತರವಾಗಿ ಸರ್ಕಾರಿ ಸೀಟುಗಳನ್ನು ಕಡಿತಗೊಳಿಸಲಾಗಿದ್ದು, ಶುಲ್ಕ ಏರಿಕೆ ವ್ಯಾಪಕವಾಗಿದೆ. 2003-04ರಲ್ಲಿ ಸೀಟು ಹಂಚಿಕೆ ಸರ್ಕಾರಿ-75 ಖಾಸಗಿ-25 ಇತ್ತು. ಆದರೆ, 2011-12ರಲ್ಲಿ ಸರ್ಕಾರಿ-40, ಖಾಸಗಿ-60 ಆಗಿದೆ. ಆದ್ದರಿಂದ ಸರ್ಕಾರ ಈ ವಿಚಾರದಲ್ಲಿ ಕಾಮೆಡ್-ಕೆ ಜತೆ ರಾಜಿಯಾಗದೇ ವಿದ್ಯಾರ್ಥಿಗಳ ಪರ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಸೀಟುಗಳ ಹಂಚಿಕೆ ಅನುಪಾತ 75:25ರಷ್ಟಿರಬೇಕು. ಬಡ-ದಲಿತ, ಹಿಂದುಳಿದ-ಮಧ್ಯಮ ವರ್ಗದ ವಿದ್ಯಾರ್ಥಿಗಳ ಕೈಗೆಟುಕುವ ರೀತಿ ಶುಲ್ಕ ನಿಗದಿಗೊಳಿಸಬೇಕೆಂದು ಆಗ್ರಹಿಸಲಾಯಿತು. ಸುಭಾಸ ಮಾದರ, ಮಲ್ಲೇಶ ಗೋಟನವರ, ಮಂಜು ಕಾಳೆ, ಜ್ಯೋತಿ ದೊಡ್ಮನಿ, ಶೃತಿ ಮುದ್ರಗಣಿ, ಪರಶುರಾಮ ಎನ್, ಈರಣ್ಣ ಕೂರವರ, ವಿದ್ಯಾರ್ಥಿಗಳಾದ ಸುಭಾಸ ಮಾದರ, ವೀರಯ್ಯ ಹಿರೇಮಠ, ಪ್ರಶಾಂತ ಇಂಗಳಗಿ, ಕೃಷ್ಣ, ದೇವರಾಜ ಪ್ರತಿಭಟನೆಯಲ್ಲಿ ಇನ್ನಿತರರಿದ್ದರು.