ಹೊಡೆದಾಟ: ಆರೋಪಿಗಳಿಗೆ ಶಿಕ್ಷೆ
ಹಾನಗಲ್ಲ: ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮದಲ್ಲಿ ನಡೆದ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮದ್ವೇಶ ದಬೇರ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
ತಾಲೂಕಿನ ಚಿಕ್ಕಹುಲಾಳ ಗ್ರಾಮದ ಬೀರಪ್ಪ ಗಾಜಿ ಹಾಗೂ ರೇವಣಪ್ಪ ಗಾಜಿ ಎಂಬ ಆರೋಪಿತರು 2010ರ ಜೂನ್ 3ರಂದು ಇದೇ ಗ್ರಾಮದ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನೀಲವ್ವ ಗಾಜಿ, ಪುಟ್ಟಪ್ಪ ಕೂಡಲ, ಲಲಿತಾ ಗಾಜಿ ಎಂಬುವವರ ಮೇಲೆ ಹಲ್ಲೆ ಮಾಡಿದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಸಾಕ್ಷಾಧಾರಗಳಿಂದ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ರು. 5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತ ಶಿಕ್ಷಕಿಗೆ ಶಿಕ್ಷಕರಿಂದ ಅಭಿನಂದನೆ
ರಾಣಿಬೆನ್ನೂರು: 2012-13ನೇ ಸಾಲಿನ ರಾಜ್ಯ ಪ್ರತಿಭಾ ಪ್ರಶಸ್ತಿ ಪುರಸ್ಕೃತ ತಾಲೂಕಿನ ಹಿರೇಬಿದರಿ ಗ್ರಾಮದ ಸಹಿಪ್ರಾ ಶಾಲೆಯ ಸಹ ಶಿಕ್ಷಕಿ ಎಫ್.ಎಫ್. ಬಂಕಾಪುರ ಅವರನ್ನು ಶಾಲೆಯ ಶಿಕ್ಷಕರು ಅಭಿನಂದಿಸಿದರು.
ಅಭಿನಂದನೆ ಸ್ವಿಕರಿಸಿ ಶಿಕ್ಷಕಿ ಎಫ್.ಎಫ್. ಬಂಕಾಪುರ ಮಾತನಾಡಿ, 15 ವರ್ಷಗಳಿಂದ ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರತಿಭೆಗೆ ಪ್ರೋತ್ಸಾಹಿಸಿರುವ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಮಿತಿಯ ಸದಸ್ಯರಿಗೆ ಹಾಗೂ ವೃತ್ತಿ ಬಾಂಧವರಿಗೆ ಅಭಿನಂದಿಸುವುದಾಗಿ ಶಿಕ್ಷಕಿ ಬಂಕಾಪುರ ತಿಳಿಸಿದರು. ಪ್ರಧಾನ ಗುರು ಗೊರವರ, ಆರ್. ಎಚ್. ಕ್ಯಾತರ, ಎಸ್.ಎಸ್. ಕಾಯಕದ, ತಾಲೂಕಾ ಸಾಕ್ಷರ ಸೌರಭ ಸಮಿತಿ ಸಂಯೋಜಕ ಆರ್.ಡಿ. ಹೊಂಬರಡಿ, ಗಣೇಶ ಮಜ್ಜಿಗೇರಿ ಇದ್ದರು.