ಅಂಗವಿಕಲರನ್ನು ಪ್ರೀತಿ,ವಿಶ್ವಾಸದಿಂದ ಕಾಣಿರಿ: ಸುಳಿಗನ್ನಿ
ಹಾನಗಲ್ಲ: ವಿಕಲಚೇತನ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎಂದು ಜಿಲ್ಲಾ ಸಹಾಯಕ ಸಮನ್ವಯಾಧಿಕಾರಿ ಜಿ.ಕೆ. ಸುಳಿಗನ್ನಿ ನುಡಿದರು.
ಗುರುವಾರ ಹಾನಗಲ್ಲಿನ ಬಿಆರ್ಸಿ ಕಚೇರಿಯಲ್ಲಿ ನಡೆದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಜರುಗಿದ ವೈದ್ಯಕೀಯ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧಿಮಾಂದ್ಯ, ಕಿವಿ, ಕಣ್ಣು, ಮೂಗು ದೋಷವುಳ್ಳ ಹಾಗೂ ಚಲನವಲನ ದೋಷವುಳ್ಳ ಮಕ್ಕಳಿಗೆ ಸರ್ವ ಶಿಕ್ಷಣ ಅಭಿಯಾನದಡಿ ನೀಡುವ ವೈದ್ಯಕೀಯ ಸವಲತ್ತನ್ನು ಪಾಲಕರು ಬಳಸಿಕೊಳ್ಳಬೇಕು. ವಿಕಲಚೇತನ ಮಕ್ಕಳೂ ಕೂಡ ಎಲ್ಲ ಮಕ್ಕಳಂತೆ ಶಿಕ್ಷಣ ಪಡೆಯಬೇಕು. ಇದಕ್ಕೆ ಪಾಲಕರು ಸಹಕಾರ ಅತ್ಯವಶ್ಯವಾಗಿದೆ ಎಂದ ಅವರು, ಪ್ರೀತಿ, ವಾತ್ಸಲ್ಯದಿಂದ ಮಕ್ಕಳ ಮನಸ್ಸನ್ನು ಗೆದ್ದು ಸಾಮಾನ್ಯ ಮಕ್ಕಳಂತೆ ಈ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಮುಂದೆ ಬರುವಂತೆ ಅವಶ್ಯಕತೆಗಳನ್ನು ಒದಗಿಸಲು ಪಾಲಕರಿಗೆ ಕರೆ ನೀಡಿದರು.
ಜಿಲ್ಲಾ ಸಮನ್ವಯಾಧಿಕಾರಿ ಎಚ್.ಎಂ. ಖಾನ್, ಸರ್ವ ಶಿಕ್ಷಣ ಅಭಿಯಾನದಡಿ ನಡೆಸುವ ವೈದ್ಯಕೀಯ ಉಚಿತ ಶಿಬಿರದಲ್ಲಿ ವೈದ್ಯರು ಶಿಫಾರಸು ಮಾಡಿದ ಮಕ್ಕಳಿಗೆ ಕನ್ನಡಕ, ಶ್ರವಣಯಂತ್ರ, ಟ್ರೈಸಿಕಲ್ ಮುಂತಾದ ಸಾಧನ-ಸಲಕರಣೆಗಳನ್ನು ಉಚಿತವಾಗಿ ನೀಡಲಾಗುವುದು. ಪಾಲಕರು ಅಗತ್ಯತೆಯುಳ್ಳ ಮಕ್ಕಳನ್ನು ಇಂತಹ ಶಿಬಿರದಲ್ಲಿ ತಪಾಸಣೆಗೊಳಪಡಿಸಿ ಸರ್ಕಾರದ ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಶಿಬಿರದ ವೈದ್ಯಾಧಿಕಾರಿಗಳಾದ ಡಾ. ವಿಜಯಕುಮಾರ ಹಿರೇಮಠ, ಡಾ. ಶಿವ, ಡಾ. ಪ್ರಿಯಾಂಕಾ, ಡಾ. ಸಂದೀಪ, ಜಿಲ್ಲಾ ಸಮನ್ವಯ ಸಂಪನ್ಮೂಲ ಅಧಿಕಾರಿ ಶಿವಕುಮಾರ, ಎ.ಆರ್. ಪ್ರಾಣೇಶ, ಎಫ್.ಎಚ್. ಬಾಲಹನುಮಣ್ಣನವರ, ಎಂ.ಕೆ. ಭೈರಕ್ಕನವರ ಇದ್ದರು.