ಡೆಂಘೀ ತಡೆಗೆ ಪರಿಸರ ಸ್ವಚ್ಛವಾಗಿಡಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜೂ. 13
ಡೆಂಘೀ ತಡೆಗಟ್ಟಲು ಮನೆ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಡುವ ಜತೆಗೆ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು ಎಂದು ಅರಳೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕಿರಣಕುಮಾರ್ ಮಿರ್ಜಿ ಹೇಳಿದರು.
ಗುರುವಾರ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಡೆಂಘೀ ಜ್ವರ ಕುರಿತ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡೆಂಘೀ ಮಕ್ಕಳು ಹಾಗೂ ವೃದ್ಧರಿಗೆ ಬೇಗನೆ ತಗಲುತ್ತದೆ. ಹೀಗಾಗಿ ಮನೆಯಲ್ಲಿ ಎಲ್ಲರೂ ಮೈತುಂಬ ಬಟ್ಟೆ ಧರಿಸಬೇಕು. ಮಧ್ಯಾಹ್ನದಲ್ಲಿ ನಿದ್ದೆ ಮಾಡುವ ವೃದ್ಧರು ಸುತ್ತಲು ಸೊಳ್ಳೆ ಪರದೆಯನ್ನು ಕಡ್ಡಾಯವಾಗಿ ಕಟ್ಟಿಕೊಳ್ಳಬೇಕು. ಮನೆಯಲ್ಲಿ ನೀರು ಸಂಗ್ರಹಿಸುವ ಪಾತ್ರೆಗಳನ್ನು ಪ್ರತಿದಿನ ಸ್ವಚ್ಛಗೊಳಿಸುತ್ತಿರಬೇಕು. ಅಲ್ಲದೆ ಬಿಗಿಯಾದ ಮುಚ್ಚಳ ಮುಚ್ಚಬೇಕು ಎಂದು ಹೇಳಿದರು.
ಅರಳೇಶ್ವರನ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಪಿ.ಎಂ. ಚಲವಾದಿ ಮಾತನಾಡಿ, ಜ್ವರ ಬಂದ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಶಿಕ್ಷಕರು ಸಹ ಮಗುವಿನ ಕಡೆ ಗಮನಹರಿಸಿ ಅಂತಹ ಮಗು ಏನಾದರೂ ಕಂಡು ಬಂದರೆ ತಕ್ಷಣ ಪಾಲಕರಿಗೆ ತಿಳಿಸಿ ಎಂದು ಸಲಹೆ ನೀಡಿದರು.
ಶಿಕ್ಷಕರಾದ ಜಿ.ಜಿ. ಗೊರನವರ, ಟಿ. ಶಿವಕುಮಾರ್, ಎನ್.ಎ. ಕುಲಕರ್ಣಿ, ಆನಂದ ಹೆಗಡೆ, ಬಸವರಾಜ ಜಂಗಿನವರ್, ಚಂದ್ರಶೇಖರ್ ವಿ, ಜೆ.ವಿ. ದೀಪಾ, ಎ.ಎಫ್. ಕೋನಿಸಾಗರ್, ಗಣೇಶ ಲಮಾಣಿ, ಆರ್. ಗುಲಶನ್, ಸುಧಾ ಮುಕ್ತಿಗೇರಿ, ಪ್ರಭಾ ಪಾಂಡುರಂಗ, ಬಿ.ಎಂ. ಉದ್ದೇಗೌಡ್ರ, ದೀಪಾ ಜಾಂಬೇಕರ್, ಅಕ್ಷಯಾ ಗುನಗಾ, ರೇಷ್ಮಾ ನದಾಫ್, ಆರೋಗ್ಯ ಸಹಾಯಕಿ ಜ್ಯೋತಿ ಮತ್ತಿಕಟ್ಟಿ, ಆಶಾ ಕಾರ್ಯಕರ್ತೆ ಲಲಿತಾ ಟೋಪಣ್ಣನವರ್, ಸಿ.ಜಿ. ನಾಗನೂರು ಇದ್ದರು.