ಪಂಚಾಯತ್ ರಾಜ್ ತಿದ್ದುಪಡಿ ಬ್ಲಾಕ್ಮೇಲ್ ತಂತ್ರ
ಹಾನಗಲ್ಲ: ಪಂಚಾಯತಿ ಸಭೆ ನಡೆಸುವ ವಿಷಯದಲ್ಲಿ ಪಂಚಾಯತ್ ರಾಜ್ ಹೊಸ ತಿದ್ದುಪಡಿ ಅಂಗೀಕಾರ ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ಬ್ಲಾಕ್ಮೇಲ್ ಮಾಡುವ ತಂತ್ರವಾಗಿದೆ ಎಂದು ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಾಯತ್ ರಾಜ್ ವ್ಯವಸ್ಥೆ ತಿದ್ದುಪಡಿಗೆ ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ನೆಗಡಿ ಗುಣಪಡಿಸುವ ನೆಪದಲ್ಲಿ ಮೂಗು ಕೊಯ್ಯುವ ನಿರ್ಣಯ ಮಾಡಿದಂತಿದೆ. ವಿರೋಧ ಪಕ್ಷಗಳ ಅಭಿಪ್ರಾಯ ಹಾಗೂ ವಿಷಯ ಮಂಡನೆ ಲಕ್ಷಿಸದೆ, ವಿರೋಧ ಹಾಗೂ ಸಭಾತ್ಯಾಗದ ನಡುವೆಯೂ ಹಠಮಾರಿತನದಿಂದ ಈ ತಿದ್ದುಪಡಿ ಮಾಡಿರುವುದು ಆಘಾತಕಾರಿ ಸಂಗತಿ ಎಂದು ಅವರು ತಿಳಿಸಿದರು. ಗ್ರಾಮಸಭೆ ಕರೆಯಬೇಕಾದವರು ಅಧಿಕಾರಿಗಳು, ಚುನಾಯಿತ ಸದಸ್ಯರು ಮಾರ್ಗದರ್ಶನ ಮಾಡುತ್ತಾರೆ. ಈಗ ತಂದಿರುವ ತಿದ್ದುಪಡಿಯಿಂದ ಅಧಿಕಾರಿಗಳೆ ಜನಪ್ರತಿನಿಧಿಗಳನ್ನು ಬ್ಲಾಕ್ಮೇಲ್ ಮಾಡಲು ಅನುವು ಮಾಡಿ ಕೊಡುವಂತಿದೆ. ಅಧಿಕಾರಿಗಳ ಜವಾಬ್ದಾರಿಯನ್ನು ಜನಪ್ರತಿನಿಧಿಗಳ ಮೇಲೆ ಹಾಕಿ, ಸದಸ್ಯತ್ವವನ್ನೇ ರದ್ದುಪಡಿಸುವ ಹುನ್ನಾರ ಸರ್ಕಾರದ್ದಾಗಿದೆ.
6 ತಿಂಗಳಿಗೊಮ್ಮೆ ವಾರ್ಡ್ ಸಭೆ ಹಾಗೂ ಗ್ರಾಮಸಭೆ ನಡೆಸುವುದು ಕಡ್ಡಾಯ ಹಾಗೂ ವರ್ಷಾರಂಭದಲ್ಲಿಯೇ ವೇಳಾಪಟ್ಟಿ ಪ್ರಕಟಿಸುವುದು, ಸಮಯಕ್ಕನುಸಾರವಾಗಿ ಸಭೆ ನಡೆಸುವುದರಲ್ಲಿ ಅಧಿಕಾರಿಗಳನ್ನು ಹೊಣೆಗಾರನ್ನಾಗಿಸಬೇಕು. ಅಧಿಕಾರಿಗಳ ಲೋಪವನ್ನು ಜನಪ್ರತಿನಿಧಿಗಳ ಮೇಲೆ ಹಾಕಿ ಸವಾರಿ ಮಾಡುವ ಇಂಥ ತಿದ್ದುಪಡಿಗಳು ಗ್ರಾಮೀಣಾಭಿವೃದ್ಧಿಗೆ ಮಾರಕ. ಜನಪ್ರತಿನಿಧಿಗಳ ಹಕ್ಕನ್ನು ಮೊಟಕುಗೊಳಿಸುವ ಸದ್ದುಗದ್ದಲವಿಲ್ಲದೆ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವಂಥ ನಿರ್ಣಯಗಳ ಮಂಡನೆ, ಅಂಗೀಕಾರ ಶೋಭೆ ತರುವಂತಹದ್ದಲ್ಲ. ಬಹುತೇಕ ಗ್ರಾಮಗಳಲ್ಲಿ ಗ್ರಾಮವೇ ಒಂದು ವಾರ್ಡ್ ಆಗಿದೆ. ಇಂತಹದರಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳನ್ನು ಹೇಗೆ ಪ್ರತ್ಯೇಕಗೊಳಿಸುವುದು ಎಂಬ ಪ್ರಶ್ನೆ ಉಂಟಾಗುತ್ತದೆ ಎಂದರು.