ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸಿ: ಸಿ.ವಿ. ಹೊರಟ್ಟಿ
ಹಾವೇರಿ: ಮಕ್ಕಳು ದೇಶದ ಸಂಪತ್ತು, ಅವರು ಬಾಲ್ಯದ ಬದುಕು ನಲಿಯುವ ಮೂಲಕ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಬಾಲ ಕಾರ್ಮಿಕ ಮಕ್ಕಳನ್ನು ಕೆಲಸದಿಂದ ಶಾಲೆಗೆ ಕರೆ ತಂದು ಅವರಿಗೆ ಉಚಿತ ವಸತಿಯೊಂದಿಗೆ ಶಿಕ್ಷಣ ನೀಡಿ ಶೈಕ್ಷಣಿಕ ಮುಖ್ಯವಾಹಿನಿಗೆ ತರಲು ಸಂಜೀವಿನಿ ಸಮಗ್ರ ಅಭಿವೃದ್ಧಿ ಸಂಸ್ಥೆಯು ಸೇತುವೆಯಂತೆ ಕಾರ್ಯನಿರ್ವಹಿಸಿ ಮಕ್ಕಳ ಬದುಕಿಗೆ ದಾರಿದೀಪವಾಗಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ವಿ. ಹೊರಟ್ಟಿ ಹೇಳಿದರು.
ನಗರದಲ್ಲಿ ಸರ್ಕಾರೇತರ ಸಂಸ್ಥೆ ಸಂಜೀವಿನಿ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಆರಂಭಿಸಲಾದ ಬಾಲ ಕಾರ್ಮಿಕರ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ತಾವು ನಕ್ಕು, ನಲಿಯುವ ಸಮಯದಲ್ಲಿ ವ್ಯವಸ್ಥೆಯ ಕೊರತೆಯಿಂದ ಬಾಲ್ಯದ ಬದುಕು ಹಾಳಾಗುತ್ತಿದ್ದು, ಸಮಾಜಕ್ಕೆ ಅಂಟಿದ ಕಳಂಕದಂತೆ ಇದನ್ನು ತೊಡೆದು ಹಾಕಲು ಸಂಸ್ಥೆಗಳು ಶ್ರಮಿಸಬೇಕೆಂದು ಹೇಳಿದರು.
ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ವತಿಯಿಂದ ನಗರದ ಯಾಲಕ್ಕಿ ಓಣಿಯಲ್ಲಿ ಆರಂಭಿಸಲಾಗಿರುವ ಬಾಲ ಕಾರ್ಮಿಕ ಶಾಲೆಯಲ್ಲಿ 50 ಮಕ್ಕಳಿಗೆ ಅವಕಾಶವಿದ್ದು, ಶಾಲೆಬಿಟ್ಟ ಮಕ್ಕಳನ್ನು ಇಲ್ಲಿ ಇರಿಸಿ ಪಾಠದ ಜೊತೆಗೆ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರತಿ ವರ್ಷ ಇವರಿಗೆ ಇಲ್ಲಿ ಶಿಕ್ಷಣ ನೀಡಿ, ಪುನಃ ಅವರನ್ನು ಶಿಕ್ಷಣದಿಂದ ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳಿಸಲಾಗುವುದು ಎಂದರು.
ಒಂದು ಮಗುವಿಗೆ ಜಿಲ್ಲಾ ಬಾಲ ಕಾರ್ಮಿಕ ಸಂಸ್ಥೆ ವತಿಯಿಂದ ಪ್ರತಿ ತಿಂಗಳಿಗೆ ರು. 700ನ್ನು ವ್ಯಯಿಸಲಾಗುವುದು ಎಂದು ತಿಳಿಸಿ ಅವರು, ಜಿಲ್ಲಾ ಬಾಲ ಕಾರ್ಮಿಕ ಸಂಸ್ಥೆಯ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳು, ಜಿಲ್ಲೆಯ ವಿವಿಧೆಡೆ ಇನ್ನೂ 10 ಇಂತಹ ಶಾಲೆಗಳನ್ನು ಸರ್ಕಾರೇತರ ಸಂಸ್ಥೆಗಳ ನಿರ್ವಹಣೆಯಲ್ಲಿ ಆರಂಭಿಸಲು ಅನುಮತಿ ನೀಡಿದ್ದು, ಇವು ಸಹ ಆರಂಭಿಕ ಹಂತದಲ್ಲಿವೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘದ ಕ್ಷೇತ್ರಾಧಿಕಾರಿ ವಿನಯ ಘೋರ್ಪಡೆ, ಸಂಜೀವಿನಿ ಸಮಗ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರುದ್ರೇಶ ಚ. ಚಿನ್ನಣ್ಣನವರ ಮತ್ತಿತರರು ಭಾಗವಹಿಸಿದರು. ಫಕ್ಕೀರೇಶ ನಾಡಗೇರ ಸ್ವಾಗತಿಸಿದರು. ರಘು ಮಾಳಗಿ ವಂದಿಸಿದರು.