ಸೂಕ್ತ ಶಿಕ್ಷಣ ಒದಗಿಸಿ: ಮನೋಹರ
ಹಾನಗಲ್ಲ: ಪ್ರತಿಯೊಬ್ಬ ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಮನೋಹರ ತಹಸೀಲ್ದಾರ್ ಕರೆ ನೀಡಿದರು.
ತಾಪಂ ಸಭಾ ಭವನದಲ್ಲಿ ನಡೆದ ಅಕ್ಷರ ದಾಸೋಹ ಕಾರ್ಯಕ್ರಮದಡಿ ಹಾನಗಲ್ಲ ತಾಲೂಕಿನ 38 ಶಾಲೆಗಳಿಗೆ ಮಂಜೂರಾದ ಅಡುಗೆ ಕೊಠಡಿಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಕೊಠಡಿಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಲಕಾಲಕ್ಕೆ ಅಧಿಕಾರಿಗಳು ಕಾಮಗಾರಿಗಳನ್ನು ವೀಕ್ಷಿಸಿ ಇಲಾಖೆಯ ಮಾರ್ಗಸೂಚಿಗೆ ಅನುಗುಣವಾಗಿ ಉತ್ತಮ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕ ತಹಸೀಲ್ದಾರ್ ಸಲಹೆ ನೀಡಿದರು.
ಜಿಲ್ಲಾ ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿ ಝಡ್.ಎಂ. ಖಾಜಿ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಮಹದೇವಪ್ಪ ಬಾಗಸರ, ಕಸ್ತೂರೆವ್ವ ವಡ್ಡರ, ತಾಪಂ ಸದಸ್ಯರಾದ ಕಲವೀರಪ್ಪ ಪವಾಡಿ, ಸುರೇಶ ನೆರ್ಕಮನಿ, ರಾಜೇಂದ್ರ ಬಾಕರ್, ಮಧು ಪಾಣಿಗಟ್ಟಿ, ವಿಜಯಾ ಹಿರೇಮಠ, ಝಕೀಯಾಬಾನು ಇದ್ದರು. ಹಾನಗಲ್ಲ ಬಿಇಓ ವಿ.ವಿ. ಸಾಲಿಮಠ ಸ್ವಾಗತಿಸಿದರು. ಬಿಸಿಯೂಟ ಸಹಾಯಕ ನಿರ್ದೇಶಕ ರಂಗಸ್ವಾಮಿ ಎಸ್. ಬಿಸಿಯೂಟ ವಿವರ ನೀಡಿದರು. ಸಂಪನ್ಮೂಲ ವ್ಯಕ್ತಿ ಅಶೋಕ ಹನುಮಾಪುರ ನಿರೂಪಿಸಿದರು. ಬೈಚವಳ್ಳಿಯ ಶಿಕ್ಷಕ ಎನ್.ಟಿ. ದುರ್ಗಣ್ಣನವರ ವಂದಿಸಿದರು.