ಬಸವಣ್ಣನವರ ವಚನ ಜೀವನ ಸ್ಫೂರ್ತಿ
ರಾಣಿಬೆನ್ನೂರು: ಬಸವಣ್ಣನವರು ಇಂದಿನ ಸಮಾಜಕ್ಕೆ ಸುಜ್ಞಾನದ ಕಣ್ಣು ತೆರೆಸಿ ಅಜ್ಞಾನ ಹೊಡೆದೊಡಿಸುವಂತಹ ವಚನಗಳನ್ನು ನೀಡಿದ್ದಾರೆ. ಈ ವಚನಗಳನ್ನು ಸರ್ವರೂ ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆದಾಗ ನಿಜವಾದ ಮಾನವ ಧರ್ಮ ಪಾಲಿಸಿದಂತಾಗುತ್ತದೆ ಎಂದು ಇಲ್ಲಿನ ವಿರಕ್ತಮಠದ ಪೀಠಾಧಿಪತಿ ಗುರುಬಸವ ಸ್ವಾಮೀಜಿ ನುಡಿದರು.
ಇಲ್ಲಿನ ದೊಡ್ಡಪೇಟೆಯ ವಿರಕ್ತಮಠದಲ್ಲಿ ನಡೆದ ಮಾಸಿಕ ಬಸವಾನುಭವ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬಸವಣ್ಣನವರು ಸಕಲ ಜೀವರಾಶಿಗಳ ಕಲ್ಯಾಣ ಬಯಸಿದವರು. ಅಂಥವರ ವಚನಗಳ ಸಾರದಂತೆ ಮನುಷ್ಯನು ಆಧ್ಯಾತ್ಮಿಕ ಹಾದಿ ಹಿಡಿದು ಆನಂದಮಯ ದಾರಿಯಡೆಗೆ ಸಾಗುವುದರಿಂದ ಸರ್ವರೂ ಸುಖವಾಗಿ ಬಾಳಲು ಸಾಧ್ಯ ಎಂದರು.
ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ವಿಷಯಗಳನ್ನು ತಿಳಿಯುವಲ್ಲಿ ಆಸಕ್ತಿ, ಶ್ರದ್ಧೆ ಮತ್ತು ಮನನ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು. ನ್ಯಾಯವಾದಿಗಳಾದ ಕೆ.ಎನ್. ಕೋರಧಾನಮಠ, ಎಂ. ಚನ್ನಬಸಪ್ಪ, ಕೆ.ಎಂ. ಬಂದಮ್ಮನವರ, ಅ.ಸಿ. ಹಿರೇಮಠ, ರಾಜೇಶ ಜಂಬಿಗಿ, ಪಾರ್ವತೆಮ್ಮ ಬೆನಕನಕೊಂಡ, ಗೀತಾ ಹಿರೇಮಠ, ಡಾ. ವಾಗೀಶ, ಸಿದ್ದಣ್ಣ ಅಡಿವೇರ ಮತ್ತಿತರರು ಇದ್ದರು. ಎಸ್.ಬಿ. ಹರಿಹರ ಸ್ವಾಗತಿಸಿದರು. ವಿ.ವಿ. ಹರಪನಹಳ್ಳಿ ನಿರೂಪಿಸಿದರು. ಗಾಯಿತ್ರಮ್ಮ ಕುರವತ್ತಿ ವಂದಿಸಿದರು.