ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಚಿವ ಕಿಮ್ಮನೆಗೆ ಮನವಿ
ಬ್ಯಾಡಗಿ: ಖಾಲಿ ಹುದ್ದೆ ಭರ್ತಿ ಸೇರಿದಂತೆ ನೆನಗುದಿಗೆ ಬಿದ್ದ ಪದವಿಪೂರ್ವ ಇಲಾಖೆ ಸಿಬ್ಬಂದಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಪದಾಧಿಕಾರಿಗಳ ನಿಯೋಗ ಬೆಂಗಳೂರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರಗೆ ಮನವಿ ನೀಡಿ ಒತ್ತಾಯಿಸಿದೆ.
15 ವರ್ಷಗಳಿಂದ ಇತ್ಯರ್ಥವಾಗದಿರುವ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ, ಪ್ರಾಂಶುಪಾಲರ ವೇತನ ಶ್ರೇಣಿ ಪರಿಷ್ಕರಣೆ, ಕಾಲ್ಪನಿಕ ವೇತನ, ಗುತ್ತಿಗೆ ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡಬೇಕು. ವೈದ್ಯಕೀಯ ಭತ್ಯೆ, ಪರೀಕ್ಷೆಗೆ ಸಂಬಂಧಿಸಿದ ಸಂಭಾವನೆಗಳ ಪರಿಷ್ಕರಣೆ, 5 ವರ್ಷಗಳಿಂದ ಯೋಜನೆಯಡಿ ವೇತನ ಪಡೆದ ಇಲಾಖೆ ಸಿಬ್ಬಂದಿಯನ್ನು ಯೋಜನೇತರ ವೆಚ್ಚಕ್ಕೆ ಒಳಪಡಿಸಬೇಕಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಮುಚ್ಚುವ ಭೀತಿಯಲ್ಲಿದೆ. ಈ ಇಲಾಖೆ ಸಮಸ್ಯೆ ತಕ್ಷಣ ಪರಿಹರಿಸಬೇಕೆಂದರು.