ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಯೋಗ್ಯರಿಂದ ಸರ್ವರ ಕಲ್ಯಾಣ

Lingaraj Badiger
Updated On : 15 Jun 2013, 12:07 pm

ರಾಣಿಬೆನ್ನೂರು: ಯೋಗ್ಯರೆನ್ನಿಸಿಕೊಂಡವರೆಲ್ಲಾ ಯೋಗ್ಯ ಸ್ಥಾನದಲ್ಲಿ ಕುಳಿತಾಗ ಮಾತ್ರ ಸರ್ವ ಜನಾಂಗದವರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭ ಸಮಸ್ತ ಜನರಿಗೆ ತಲುಪಲು ಸಾಧ್ಯವಾಗುತ್ತದೆ. ಅಯೋಗ್ಯರು ಆ ಸ್ಥಾನ ಅಲಂಕರಿಸಿದಲ್ಲಿ ದುರ್ಭಿಕ್ಷೆ ಉಂಟಾಗುತ್ತದೆ ಎಂದು ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಡಾ೤ ಪಂಡಿತಾರಾಧ್ಯ ಶ್ರೀಗಳು ನುಡಿದರು.
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಾನ್ನಿದ್ಯ ವಹಿಸಿ ಮಾತನಾಡಿದರು.
ಪ್ರಪಂಚದ ಎಲ್ಲಾ ದೇಶದವರು ಮೆಚ್ಚುವಂತಹ ಭಾಷೆಗಳಲ್ಲೊಂದಾದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದಕ್ಕಾಗಿ 12ನೇ ಶತಮಾನದಲ್ಲಿ ಅವತರಿಸಿದ್ದ ಶರಣ, ಸಂತರು ತಮ್ಮ ಶಕ್ತಿ ಮೀರಿ ಕಾರ್ಯನಿರ್ವಹಿಸಿದ್ದರ ಫಲವಾಗಿ ಇಂದು ಕನ್ನಡ ಭಾಷೆ ಎಲ್ಲರೂ ಮೆಚ್ಚುವಂತಹ ಭಾಷೆಯಾಗಿ ಹೊರಹೊಮ್ಮಿದೆ ಎಂದರು.
ಸಿಗರೇಟ್ ನಿಷೇಧಿಸಲಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸ್ವಲ್ಪ ದಿನಗಳಲ್ಲಿ ರಾಜ್ಯಾದ್ಯಂತ ಗುಟಕಾ ನಿಷೇಧಿಸಿರುವುದು ಮೆಚ್ಚುಗೆ ಕಾರ್ಯವಾಗಿದ್ದು, ಗುಟಕಾಕ್ಕಿಂತ ತೀರಾ ಅಪಾಯಕಾರಿಯಾಗಿರುವ ಸಾರಾಯಿ ಹಾಗೂ ಸಿಗರೇಟನ್ನು ನಿಷೇಧಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯಲು ನೀರಿಲ್ಲದಿದ್ದರೂ ಊರಿನ ಪ್ರತಿಯೊಂದು ಓಣಿಗೊಂದರಂತೆ ಸಾರಾಯಿ ಅಂಗಡಿಗಳು ತಲೆಯೆತ್ತಿರುವ ಕಾರಣ ಒಂದು ಊರಿನಲ್ಲಿ 3ರಿಂದ 6 ನಕಲಿ ಸಾರಾಯಿ ಅಂಗಡಿಗಳು ತಲೆಯೆತ್ತಿದ್ದು, ಅನೇಕ ಜನ ಕುಡುಕರು ನಿತ್ಯ ತಾವು ದುಡಿದ ದುಡಿಮೆಯನ್ನೆಲ್ಲಾ ಸಾರಾಯಿ ಅಂಗಡಿಗೆ ಕಟ್ಟುತ್ತಿರುವ ಕಾರಣ, ಬಡವರ ಮನೆಗಳಲ್ಲಿರುವ ಶಾಂತಿ, ನೆಮ್ಮದಿ ಹಾಳಾಗಿದೆ. ಕಾರಣ ಗುಟಕಾ ನಿಷೇಧಿಸಿದಂತೆ, ಸಾರಾಯಿ ನಿಷೇಧಿಸಬೇಕೆಂದರು.
ಭಾಷೆಗೆ ಕೊಡಲಿ ಏಟು: ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಆಯುಕ್ತ ಡಾ೤ ಮನು ಬಳೆಗಾರ ಮಾತನಾಡಿ, ಕನ್ನಡ ನೆಲ, ಜಲ ಭಾಷೆಯ ಉಳಿವಿಗಾಗಿ ಹೋರಾಡುವವರ ಸಂಖ್ಯೆ ಕಡಿಮೆಯಾಗಿ ಕನ್ನಡದ ಹೋರಾಟಗಾರರ ಸಂಖ್ಯೆ ಹೆಚ್ಚಾಗಿರುವ ಕಾರಣ- ಕನ್ನಡ ತಾಯಿ ಭುನೇಶ್ವರಿ ದೇವಿಯು ತನ್ನಭಾಷೆ ಹಾಗೂ ನೆಲ, ಜಲಗಳಿಗೆ ಅನ್ಯಭಾಷಿಗರು ನಿತ್ಯ ಕೊಡಲಿ ಏಟು ಹಾಕಿದ್ದು ಸಹಿಸಿಕೊಂಡು ಸುಮ್ಮನೆ ಕುಳಿತಿದ್ದಾಳೆ.
2 ಸಾವಿರ ವರ್ಷಗಳ ಇತಿಹಾಸ ಪರಂಪರೆ ಹೊಂದಿರುವ ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಮೊದಲು ಶಾಸ್ತ್ರಿಯ ಸ್ದಾನಮಾನ ನೀಡುವ ಬದಲು 2004ರಲ್ಲಿ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ನಂತರ 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದರೊಂದಿಗೆ ಒಂದು ರೀತಿ ಅವಮಾನಿಸಿದೆ ಎಂದರೆ ತಪ್ಪಾಗಲಾರದು. ಕಾರಣ ನಮ್ಮ ಇಚ್ಛಾಶಕ್ತಿ ಕೊರತೆ ಎಂದು ಬಳೆಗಾರ ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ, ಜಿಲ್ಲಾದ್ಯಂತ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಕುರಿತು ವಿವರಿಸಿದರು. ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಸಂಗಾಪುರ, ಮಾಜಿ ಅಧ್ಯಕ್ಷ ವಾಸಣ್ಣ ಕುಸಗೋರು, ಶಾರದಾ ಲಮಾಣಿ, ಮಂಜುನಾಥ ಓಲೇಕಾರ, ಶಿವಕುಮಾರ ಮುದ್ದಪ್ಪಳವರ, ಲಲಿತಾ ಜಾಧವ, ಡಾ೤ ಕೆ.ಎಚ್. ಮುಕ್ಕಣ್ಣವರ, ಡಿವೈಎಸ್ಪಿ ಜಯಪ್ರಕಾಶ, ನಗರಸಭೆ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ರತ್ನಾ ಪುನೀತ, ನಿವೃತ್ತ ಪ್ರಾಚಾರ್ಯ ಖನ್ನೂರು, ಜಿ.ಜಿ. ಹೊಟ್ಟಿಗೌಡ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement