ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉತ್ತಮ ಸಂಸ್ಕೃತಿಯಿಂದ ಜೀವನ ರೂಪಿಸಿಕೊಳ್ಳಿ

Lingaraj Badiger
Updated On : 17 Jun 2013, 11:41 am

ಕನ್ನಡಪ್ರಭ ವಾರ್ತೆ, ಸವಣೂರು, ಜೂ. 16
ಸಮಚಿತ್ತ, ಸಮಭಾವಗಳೊಂದಿಗೆ ಬದುಕನ್ನು ಕಟ್ಟಿಕೊಂಡು, ದುರ್ಗುಣಗಳನ್ನು ದೂರವಿಡಬೇಕು. ಉತ್ತಮ ಸಂಸ್ಕೃತಿ, ಸದಾಚಾರಗಳೊಂದಿಗೆ ಪರೋಪಕಾರದ ಪ್ರವೃತ್ತಿ ನಮ್ಮದಾಗಬೇಕು ಎಂದು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದ ವಿರಕ್ತಮಠದಲ್ಲಿ ಜರುಗಿದ ಲಿಂ. ರುದ್ರಮುನಿ ಸ್ವಾಮಿಗಳ 29ನೇ ಪುಣ್ಯ ಸ್ಮರಣೋತ್ಸವ, ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸತ್ಕಾರ್ಯದಿಂದ ಬದುಕು ಸಾರ್ಥಕ: ಅಹಂಕಾರದ ಪ್ರವೃತ್ತಿ ದುರ್ವಾಸನೆ ಇದ್ದಂತೆ. ಇದು ವ್ಯಕ್ತಿಯನ್ನು ಸಮಾಜದಿಂದ ದೂರ ಉಳಿಸುತ್ತದೆ. ವಿನಯ ಎಂಬ ಸುಗಂಧ ಜನರ ಪ್ರೀತಿ, ವಿಶ್ವಾಸಗಳನ್ನು ಉಡುಗೊರೆಯಾಗಿ ನೀಡುತ್ತದೆ. ನಾವು ಮಾಡುವ ಪ್ರತಿಯೊಂದು ಸತ್ಕಾರ್ಯಗಳು ಬದುಕನ್ನು ಸಾರ್ಥಕತೆಯತ್ತ ಸಾಗಿಸುತ್ತದೆ.
ಶಿಕ್ಷಣ, ಸಂಸ್ಕಾರ ಇರಲಿ: ಶರಣರಿಗೆ ಬಾಗುವ ತಲೆ ಶುಭ ಹಾರೈಕೆಗಳನ್ನು ಹೊತ್ತುಕೊಳ್ಳುತ್ತದೆ. ಹಿರಿಯರ ಅನುಸರಣೆ ಬದುಕಿಗೆ ದೀಪವಾಗುತ್ತದೆ. ಇದರೊಂದಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳು ಬದುಕನ್ನು ಸರಿಯಾದ ಮಾರ್ಗದಲ್ಲಿ ಸಾಗಿಸುತ್ತವೆ ಎಂದು ಗುರುಗಳು ತಿಳಿಸಿದರು. ಮಠ-ಮಂದಿರಗಳು ಸಮಾಜಕ್ಕೆ ನೀಡುತ್ತಿರುವ ಮೌಲ್ಯಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಕಂಪ್ಲಿಯ ಚನ್ನಬಸವ ಸ್ವಾಮಿಜಿ ತಿಳಿಸಿದರು. ಜಗತ್ತಿನ ಸುಂದರತೆ ಹಾಗೂ ಪರಿಪೂರ್ಣತೆಗಳನ್ನು ಪ್ರಸ್ತಾಪಿಸಿದ ಗುಡ್ಡದ ಅನವೇರಿ ಶಿವಯೋಗಿಶ್ವರ ಸ್ವಾಮೀಜಿಗಳು, ಪ್ರತಿ ಮಗುವಿನ ಮನದಲ್ಲಿಯೂ ಜ್ಞಾನದ ದೀಪ ಬೆಳಗಿಸುವಂತೆ ಸೂಚಿಸಿದರು.
ಶ್ರೀಮಠಕ್ಕೆ ಸೂಕ್ತ ಸೌಲಭ್ಯ: ಕಾರ್ಯಕ್ರಮದಲ್ಲಿ ಸಂಘಟಕರಿಂದ ಸನ್ಮಾನ ಸ್ವೀಕರಿಸಿದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಶ್ರೀಮಠಕ್ಕೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು. ಅಕ್ಷರ ದಾಸೋಹ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಮಕ್ಕಳ ಶೈಕ್ಷಣಿಕ ಅವಶ್ಯಕತೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ಪ್ರತಿಯೊಂದು ಮಗುವಿಗೂ ಗುಣಾತ್ಮಕ ಶಿಕ್ಷಣ ಕಲ್ಪಿಸುವುದು ಸಮುದಾಯದ ಹೊಣೆಗಾರಿಕೆಯಾಗಿದೆ ಎಂದರು.
ಹತ್ತಿಮತ್ತೂರು ವಿರಕ್ತಮಠದ ನಿಜಗುಣ ಶಿವಯೋಗಿಗಳು, ಅಗಡಿ-ಗುತ್ತಲದ ಸಂಗನಬಸವ ಸ್ವಾಮಿಗಳು, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮಿಜಿ, ಸಿದ್ದಲಿಂಗ ಸ್ವಾಮಿಗಳು, ಚನ್ನವೀರ ಸ್ವಾಮೀಜಿ ಸಮ್ಮುಖ ವಹಿಸ್ದಿದರು. ಎಸ್‌ಬಿಎಂನ ಶಾಖಾ ವ್ಯವಸ್ಥಾಪಕ ರಂಜನಸಿಂಗ್, ಅಲ್ತಾಫ್ ಕುಸುಗಲ್, ಜಿಪಂ ಸದಸ್ಯೆ ಸಾವಿತ್ರಿ ತಳವಾರ, ಗ್ರಾಪಂ ಅಧ್ಯಕ್ಷೆ ಹಯಾತ್‌ಬಿ ಬೂದಿಹಾಳ, ಲಲಿತಾ ಕೋಳಿವಾಡ, ಜೆಡ್.ಜಿ. ಖಾಜಿ, ಬಸವರಾಜ ಗುಮತಿಮಠ, ದಾಕ್ಷಾಯಿಣಿ ದೇವಿ ಪುರಾಣಿಕಮಠ, ಬಸವರಾಜ ಕಮರಿ, ಬಸವರಾಜ ಹೂಗಾರ ಮುಂತಾದ ಪ್ರಮುಖರು ಭಾಗವಹಿಸಿದ್ದರು. ಕಾರ್ಯಕ್ರಮದ ಅಡಿ ರುದ್ರಮುನೀಶ್ವರ ಕನ್ನಡ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಯೋಜನೆಯ ಉದ್ಘಾಟನೆ ನೆರವೇರಿಸಲಾಯಿತು.
ಸ್ಟೇಟ್ ಬ್ಯಾಕ್ ಆಫ್ ಮೈಸೂರು ಶಾಖೆಯಿಂದ ಶಾಲಾ ಕೊಠಡಿಗಳಿಗೆ 7 ಫ್ಯಾನ್‌ಗಳನ್ನು ವಿತರಿಸಲಾಯಿತು.  ಮಾತೋಶ್ರೀ ನಿಂಗಮ್ಮ ಎಸ್. ಹೂಗಾರ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಶಾಲೆ ಮಕ್ಕಳಿಗೆ ನೋಟ್‌ಬುಕ್ ಉಚಿತವಾಗಿ ವಿತರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಹತ್ತಿಮತ್ತೂರು ಹೋಬಳಿ ಘಟಕ, ಜನತಾ ಸೌಹಾರ್ದ ಸಹಕಾರಿ ಬ್ಯಾಂಕ್, ಸಮಾಜಮುಖಿ ಸಂಸ್ಥೆ ಸೇರಿದಂತೆ ಗ್ರಾಮದ ವಿವಿಧ ಸಂಘಟನೆಗಳ ಪ್ರಮುಖರು, ಗ್ರಾಮದ ಪ್ರಮುಖರು, ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.
ಬಿ.ಎಂ. ಕುಲಕರ್ಣಿ, ಶ್ರೀಧರ ದೊಡ್ಮನಿ, ಹನುಮಂತಗೌಡ್ರ ಉಳ್ಳಾಗಡ್ಡಿ, ಟಿ.ಡಿ. ತಾಯಮ್ಮನವರ್, ನಾಗನಗೌಡ್ರ ನಿಂಗನಗೌಡ್ರ, ಶದ್ಲಿಂಗಪ್ಪ ಕರಬಸಮ್ಮನವರ್, ಎಲ್.ವಿ. ನಾಯ್ಕರ್, ಫಕ್ಕೀರಸ್ವಾಮಿ ಮಟ್ಟಣ್ಣನವರ್ ಸೇರಿದಂತೆ ಹಲವಾರು ಪ್ರಮುಖರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement