ಪ್ರಾಮಾಣಿಕ ಕಾರ್ಯದಿಂದ ಯೋಜನೆ ಯಶಸ್ವಿ
ಹಾನಗಲ್ಲ: ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರು ಹೇಳಿದರು.
ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಉಪಕೇಂದ್ರದ ಎದುರು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡೆಂಘೀ ಜ್ವರ ನಿಯಂತ್ರಣ ಜನಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕೊಪ್ಪರಸಿಕೊಪ್ಪ ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರತಿಯೊಂದು ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತ ಬಂದಿದ್ದಾರೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಕಾಲಕ್ಕೆ ಲಾರ್ವಾ ಸರ್ವೆ, ಫಾಗಿಂಗ್, ನೀರಿನ ಶುದ್ದೀಕರಣದ ಕುರಿತು ಸಲಹೆ ನೀಡಿ, ಡೆಂಘೀ ರೋಗ ಹರಡದಂತೆ ಮುಂಜಾಗ್ರತೆ ವಹಿಸಿದ್ದಾರೆ. ಸರ್ಕಾರದ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಉಪಕೇಂದ್ರದಿಂದ ಪ್ರಾರಂಭಗೊಂಡ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಉಪಕೇಂದ್ರದ ಕಿ.ಮ. ಆರೋಗ್ಯ ಸಹಾಯಕಿ ಎಸ್.ಎಸ್. ಮಡಿವಾಳರ ಧ್ವನಿವರ್ಧಕದ ಮೂಲಕ ಡೆಂಘೀ ರೋಗ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ನೇತ್ರಾ ಮತ್ತಿಹಳ್ಳಿ, ಸಂಚಾರಿ ಆರೋಗ್ಯ ಘಟಕದ ಡಾ ವಿ.ಎಂ. ಕುಲಕರ್ಣಿ, ಯುನಾನಿ ಆಸ್ಪತ್ರೆ ವ್ಯದ್ಯಾಧಿಕಾರಿ ಡಾ ಎಂ.ಎಲ್. ಲೋಹಾರ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ.ಎಚ್. ಶ್ರೀಧರ, ಎಸ್.ಆರ್. ವಡ್ಡರ, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ, ಸಂಚಾರಿ ಆರೋಗ್ಯ ಘಟಕದ ವ್ಯವಸ್ಥಾಪಕ ಎಂ.ಎಸ್. ನಾಗೇಂದ್ರ, ಗ್ರಾಮಸ್ಥರು ಪಾಲ್ಗೊಂಡಿದ್ದರು. ನಂತರ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹುಡಾ, ಗಾಜೀಪುರ, ಹುಲಗಿನಕೊಪ್ಪ ಗ್ರಾಮದಲ್ಲೂ ಜಾಗೃತಿ ಜಾಥಾ ನಡೆಸಲಾಯಿತು.