ಸ್ವಚ್ಛತೆ ನಿರ್ಲಕ್ಷ್ಯ: ಕ್ರಮಕ್ಕೆ ಆಗ್ರಹ
ರಾಣಿಬೆನ್ನೂರು: ನಗರದ ಹೃದಯಭಾಗದಲ್ಲಿರುವ ತಾಲೂಕು ಪಂಚಾಯಿತಿ ಆವರಣ ಬಯಲು ಮಲ-ಮೂತ್ರ ವಿಸರ್ಜನೆಯ ತಾಣವಾಗಿದ್ದು, ನಿಯಂತ್ರಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೂಳ್ಳಬೇಕೆಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಮಲ್ಲಿಕಾರ್ಜುನ ಎಂ. ಪೂಜಾರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಇಲ್ಲಿನ ಪೋಸ್ಟ್ ಸರ್ಕಲ್ ಸಮಿಪದಲ್ಲಿರುವ ತಾಲೂಕು ಪಂಚಾಯಿತಿ ಆವರಣದಲ್ಲಿ ರಾಣಿಬೆನ್ನೂರು ಹಾಗೂ ಬ್ಯಾಡಗಿ ತಾಲೂಕು ಆಡಳಿತ ನಿರ್ವಹಿಸುವ ಶಾಸಕರು, ತಾಪಂ ಅಧ್ಯಕ್ಷರು ಕುಳಿತುಕೊಳ್ಳಲು ಸುಸಜ್ಜಿತ ಸುರ್ವಣ ಸೌಧ ಕಟ್ಟಡ ನಿರ್ಮಿಸಲಾಗಿದೆ. ಹಲವಾರು ವರ್ಷಗಳಿಂದೀಚೆಗೆ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸುವರ್ಣ ಸೌಧ ಕಟ್ಟಡದ ಹಿಂಬದಿಯಲ್ಲಿ, ನಿತ್ಯ ನೂರಾರು ಜನ ಮಲ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಹಾಗೂ ಕಿಡಿಗೇಡಿಗಳು ಚರ್ಚ್ ರಸ್ತೆ ಪಕ್ಕದಲ್ಲಿರುವ ತಾಪಂ ಕಾಂಪೌಂಡ್ ಒಡೆದು ಮಲಮೂತ್ರ ವಿರ್ಸಜನೆ ಮಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಕಂಡು ಕಾಣದವರಂತೆ ಕುಳಿತಿದ್ದು, ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಡೆಂಘೀ, ಇತರ ಕಾಯಿಲೆಯಿಂದ ರಕ್ಷಿಸಬೇಕೆಂದು ಜಿಲ್ಲಾಧಿಕಾರಿಗೆ ಮಲ್ಲಿಕಾರ್ಜುನ ಪೂಜಾರ, ಚಂದ್ರಪ್ಪ ರೊಡ್ಡನವರ ಆಗ್ರಹಿಸಿದ್ದಾರೆ.