ಅಭಿವೃದ್ಧಿ ಮಾಹಿತಿ ನೀಡ್ರಿ ಸಾಕು..
ಹಾವೇರಿ: ನಿಮ್ ರ್ಯಾಂಕ್ ಯಾರಿಗ್ ಬೇಕ್ರಿ... ಎಷ್ಟ್ ಅಭಿವೃದ್ಧಿ ಕೆಲ್ಸಾ ಮಾಡ್ರಿ ಎಂಬುದು ಅಂಕಿ-ಸಂಖ್ಯೆಯೊಂದಿಗೆ ಮಾಹಿತಿ ನೀಡ್ರಿ ಸಾಕು...
ಹೀಗೆಂದು ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ಎಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಎಷ್ಟು ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಈ ಬಾರಿ ಈ ಯೋಜನೆಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸದುಪಯೋಗವಾಗಿದೆ ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿ ಉತ್ತರಿಸಲು ತಡಬಡಾಯಿಸಿದರಲ್ಲದೇ, ಇಲ್ ಸರ್ ಈ ಯೋಜನೆ ಅಡಿಯಲ್ಲಿ ಶೇ. 95ರಷ್ಟು ಕೆಲಸ ಮಾಡಿದ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಗೆ 4ನೇ ರ್ಯಾಂಕ್ ಬಂದಿದೆ ಎಂದು ಫೋಸ್ ನೀಡಿದರು. ಇದರಿಂದ ಆಕ್ರೋಶಗೊಂಡ ಸಚಿವರು, ನಿಮ್ ರ್ಯಾಂಕ್ ತಗೋಂಡ್ ಏನ್ ಮಾಡ್ಬೇಕ್ರಿ... ಎಷ್ಟು ಕೆಲಸಾ ಆಗಿದೆ ಹೇಳ್ರಿ ಎಂದು ಅಧಿಕಾರಿಯ ಬಾಯಿ ಮುಚ್ಚಿಸಿದ ಪ್ರಸಂಗ ನಡೆಯಿತು. ರಸಗೊಬ್ಬರ ಹಾಗೂ ಬೀಜಗಳನ್ನು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳಲ್ಲದೇ ಹೆಚ್ಚುವರಿ ಕೇಂದ್ರಗಳನ್ನು ತೆರೆದು ಮಾರಾಟ ಮಾಡಿದೆ ಎಂದು ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯಕ ಅವರ ಉತ್ತರದಿಂದ ಸ್ವಲ್ವ ಕಿರಿಕಿರಿಗೊಂಡ ಸಚಿವರು, ಇನ್ಮುಂದೆ ಆಯಾ ಗ್ರಾಮ ಸೇವಾ ಸಹಕಾರಿ ಸಂಘಗಳಿಂದಲೇ ಉತ್ತರಿಸುವಂತೆ ಸೂಚಿಸಿದರು.
ಕಳಕಳಿ ಮೆರೆಯಿರಿ: ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಉತ್ತಮ ಬದುಕು ಸಾಗಿಸುವಂತೆ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ, ಅದನ್ನು ಮುಟ್ಟಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಕಳಕಳಿಯಿಂದ ಕೆಲಸ ಮಾಡಿರಿ ಎಂದು ವಿನಂತಿಸಿಕೊಂಡ ಸಚಿವರು, ಇದರಿಂದ ವಿಮುಖರಾಗುವವರ ವಿರುದ್ಧ ಯಾವುದೇ ರೀತಿಯ ಮುಲಾಜು ಇಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದರು.