ಕುಡಿವ ನೀರು: ಪ್ರತಿ ಗ್ರಾಂಪಗೆ ರು. 50 ಸಾವಿರ
ಹಾವೇರಿ: ಕುಡಿಯುವ ನೀರು ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ರು. 50 ಸಾವಿರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಣ್ಣ ಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.
ಹಾವೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಹಣ ಸದುಪಯೋಗ ಆಗಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ನಿಗಾವಹಿಸಲು ಗ್ರಾಪಂ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಹರಡಿರುವ ಡೆಂಫೀ ಜ್ವರ ನಿಯಂತ್ರಣಕ್ಕೆ ಆವಶ್ಯಕ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದ ಸಚಿವ ಹುಕ್ಕೇರಿ, ಜ್ವರದ ಲಕ್ಷಣ ಕಂಡುಬಂದ ತಕ್ಷಣ ಆಯಾ ರೋಗಿಯ ರಕ್ತದ ಸ್ಯಾಂಪಲ್ನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೆ ಹುಬ್ಬಳ್ಳಿ ಅಥವಾ ಬೆಳಗಾವಿಯ ಆಸ್ಪತ್ರೆಗಳಿಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೆ ಒಳಪಡಿಸುವ ಮೂಲಕ ರೋಗಿಯ ಕುಟುಂಬಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಸೂಚಿಸಲಾಗಿದೆ ಎಂದರು.
ಮುಲಾಜು ಬೇಡ: ಡೆಂಫೀದಿಂದ ಮೃತಪಟ್ಟಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಖಚಿತಪಟ್ಟಿದ್ದರೆ ಅದನ್ನು ಯಾವುದೇ ಅಳುಕಿಲ್ಲದೇ ತಿಳಿಸುವಂತೆಯೂ ಸೂಚಿಸಲಾಗಿದ್ದು, ಡೆಂಘೀದಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ರು. 1 ಲಕ್ಷ ನೀಡುವುದಾಗಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದರು.
ಸೂಕ್ತ ಕ್ರಮ: ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆ ಬಹಳಷ್ಟಿದ್ದು, ಕೊರತೆ ನೀಗಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಶೀಘ್ರ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದರು.
ಸಹಕಾರಿ ಸಂಘಗಳಿಂದಲೆ ವಿತರಣೆ: ರೈತರಿಗೆ ರಸಗೊಬ್ಬರ ಹಾಗೂ ಬೀಜ ವಿತರಣೆಯನ್ನು ಮುಂಬರುವ ವರ್ಷದಿಂದ ಆಯಾ ಗ್ರಾಮ ಸೇವಾ ಸಹಕಾರಿ ಸಂಘಗಳಿಂದಲೇ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು. ಪ್ರಸಕ್ತ ವರ್ಷ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲದೇ ಹೆಚ್ಚುವರಿ ಕೇಂದ್ರಗಳನ್ನು ತೆರೆದು ರಸಗೊಬ್ಬರ ಹಾಗೂ ಬೀಜಗಳನ್ನು ಮಾರಾಟ ಮಾಡಿದೆ. ಜಿಲ್ಲೆಯಲ್ಲಿ ರಸಗೊಬ್ಬರ ಹಾಗೂ ಬೀಜದ ಕೊರತೆ ಎಲ್ಲಿಯೂ ಕಂಡು ಬಂದಿಲ್ಲ ಎಂದು ವಿವರಿಸಿದರು.
ಸೂಕ್ತ ಬೆಲೆ: ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ನೀಡುವುದಕ್ಕೆ ಸಂಬಂಧಿಸಿದಂತೆ ಶೀಫ್ರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಇಳುವರಿ ನೀಡುವುದಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. ಸಭೆಯಲ್ಲಿ ಐವರು ರೈತರು, ಐವರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಅಧಿಕಾರಿಗಳು ಉಪಸ್ಥಿತರಿರುವರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉದ್ಯಮ ಆರಂಭಿಸಲು ಮುಂದೆ ಬಂದವರನ್ನು ಕಾಂಗ್ರೆಸ್ ಸರ್ಕಾರ ಕೈಬಿಡುವುದಿಲ್ಲ. ಆದರೆ, ಉದ್ಯಮ ಆರಂಭಿಸುವ ನೆಪದಲ್ಲಿ ಹೆಚ್ಚಿನ ಭೂಮಿ ಪಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದೂ ಮತ್ತೊಂದು ಪ್ರಶ್ನೆಗೆ ಸಚಿವ ಹುಕ್ಕೇರಿ ಉತ್ತರಿಸಿದರು. ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಖರೀದಿಸುವುದರಿಂದ ಭಾರಿ ಪ್ರಮಾಣದಲ್ಲಿ ಆಹಾರದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಬಿ. ಕೋಳಿವಾಡ, ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್, ಬಸವರಾಜ ಶಿವಣ್ಣನವರ, ಸೋಮಣ್ಣ ಬೇವಿನಮರದ, ಯು.ಬಿ. ಬಣಕಾರ ಹಾಗೂ ಜಿಪಂ ಸಿಇಒ ಉಮೇಶ ಕುಸುಗಲ್ ಇದ್ದರು.