ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರಿಹಾರ ಮೊತ್ತ ಹೆಚ್ಚಳ: ಸಿಎಂ ಜೊತೆ ಚರ್ಚೆ

Vishwanath S
Updated On : 19 Jun 2013, 11:46 am

 ಬ್ಯಾಡಗಿ: ರೈತ ಸಂಜೀವಿನಿ ಯೋಜನೆಯಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ ರೈತರು ಆಕಸ್ಮಿಕವಾಗಿ ಸಾವನ್ನಪ್ಪಿದಲ್ಲಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ರು. 5 ಲಕ್ಷಕ್ಕೆ ಏರಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಸ್ಥಳೀಯ ತಾಲೂಕು ಪಂಚಾಯಿತಿ ಸುವರ್ಣಸೌಧದಲ್ಲಿ ಹಾವು ಕಡಿತದಿಂದ ಸಾವನ್ನಪ್ಪಿದ ತಾಲೂಕಿನ ಸಿದ್ದಾಪುರ ಗ್ರಾಮದ ರೈತ ಮಹಾದೇವಪ್ಪ ಕರೆಮ್ಮನವರ ಕುಟುಂಬಕ್ಕೆ ಶಾಸಕ ಬಸವರಾಜ ಶಿವಣ್ಣನವರ ರು. 1 ಲಕ್ಷ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ರೈತ ಸಂಜೀವಿನಿ ಯೋಜನೆಯಡಿ ಇದೀಗ ಕೇವಲ ರು. 1 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆದರೆ, ಅಲ್ಪಮೊತ್ತದ ಪರಿಹಾರದಿಂದ ರೈತನ ಯಾವುದೇ ಸಮಸ್ಯೆಗಳು ದೂರವಾಗುವುದಿಲ್ಲ. ರೈತರು ಕಾಡುಪ್ರಾಣಿ ವಿಷಜಂತು ಸೇರಿದಂತೆ ಪ್ರಕೃತಿಯ ಜೊತೆ ಸದಾ ಹೋರಾಟ ನಡೆಸುವ ರೈತರು ಕೆಲ ಸಂದರ್ಭಗಳಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಜೀವಿನ ಯೋಜನೆ ಕೃಷಿ ಸಮುದಾಯಕ್ಕೆ ಸಹಾಯವಾಗಲಿದೆ ಎಂದರು.
ಸಾಲಮನ್ನಾ ಮಾಡಿ: ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ದುಡಿಯುವ ರೈತ ಮೃತಪಟ್ಟ ಸಂದರ್ಭಗಳಲ್ಲಿ ಕೃಷಿ ಮುನ್ನಡೆಸಿಕೊಂಡು ಹೋಗುವುದೇ ದುಸ್ತರವಾಗುತ್ತದೆ. ಅತೀವೃಷ್ಟಿ, ಅನಾವೃಷ್ಟಿ ಸೇರಿದಂತೆ ಇನ್ನಿತರ ಕಾರಣಗಳಿಗೆ ರೈತ ಪ್ರತಿವರ್ಷವೂ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ರೈತ ಕುಟುಂಬಗಳು ಸಾಲದ ಶೂಲಕ್ಕೆ ಸಿಲುಕಿ ನಲುಗಿವೆ. ಇದ್ದಕ್ಕಿದ್ದಂತೆ ಎರಗುವ ಸಾವು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದ ಅವರು, ರೈತ ಸಂಜೀವಿನ ಯೋಜನೆಯಡಿ ಪರಿಹಾರ ಮೊತ್ತ ಹೆಚ್ಚಿಸುವುದರ ಜತೆಗೆ ಕೃಷಿ ಸಂಬಂಧಿತ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ಸರಳೀಕರಣಗೊಳಿಸಿ: ಪರಿಹಾರ ಪಡೆಯಲು 5 ಇಲಾಖೆಗಳಿಂದ ತನಿಖೆ ನಡೆಸಿ ನಿರಪೇಕ್ಷಣಾ ಪತ್ರ ನೀಡಬೇಕಾಗುತ್ತದೆ. ಯೋಜನೆ ದುರುಪಯೋಗವಾಗದಿರಲಿ ಎಂಬ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಆದರೆ, ಬಹುತೇಕ ರೈತರು ಅನಕ್ಷರಸ್ಥರಾಗಿದ್ದು, ಪತ್ನಿ ಸೇರಿದಂತೆ ಆತನ ಕುಟುಂಬದ ಇನ್ನಿತರ ಸದಸ್ಯರು ಕಚೇರಿಗಳಿಗೆ ಅಲೆದಾಡಲು ಹಿಂಜರಿಯುತ್ತಿದ್ದಾರೆ. ಅಲ್ಲದೇ ಕೆಲ ಸಂದರ್ಭಗಳಲ್ಲಿ ಮುಜುಗರಕ್ಕೆ ಒಳಗಾದ ಪತ್ನಿಯರು ಯೋಜನೆ ತಿರಸ್ಕರಿಸಿದ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಪರಿಹಾರ ಮೊತ್ತ ಪಡೆಯುವ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸರಳೀಕರಣಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭ ತಾಪಂ ಅಧ್ಯಕ್ಷೆ ಚಿನ್ನವ್ವ ಫಾಸಿ, ಉಪಾಧ್ಯಕ್ಷ ಚಂದ್ರಪ್ಪ ಮುಚ್ಚಟ್ಟಿ, ಸದಸ್ಯೆ ಚಮನಬೀ ಮುಲ್ಲಾ, ಮಾಜಿ ಅಧ್ಯಕ್ಷ ಹನುಮಗೌಡ ಪಾಟೀಲ, ಎಪಿಂಎಂಸಿ ಮಾಜಿ ಸದಸ್ಯ ತಿರಕಪ್ಪ ಮರಬಸಣ್ಣನವರ, ಶೇಖಣ್ಣ ಮೈಲಾರ, ಸಹಾಯಕ ಕೃಷಿ ಅಧಿಕಾರಿ ಟಿ.ಎಚ್. ನಟರಾಜ, ತಾಪಂ ಇಒ ಕೆ. ಕೃಷ್ಣಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement