ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮದ್ಯ, ಗುಟ್ಕಾ ಮಾರಾಟ ನಿಲ್ಲಿಸಿ

Vishwanath S
Updated On : 19 Jun 2013, 11:45 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 18
ತಾಲೂಕಿನಲ್ಲಿ ಎಲ್ಲ ಕಡೆ ಅಕ್ರಮ ಗಣಿಗಾರಿಕೆ, ಮದ್ಯ ಹಾಗೂ ಗುಟ್ಕಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ತಡೆಗಟ್ಟಬೇಕು. ಇಲ್ಲದಿದ್ದಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಬಿ. ಸಿ. ಪಾಟೀಲ  ಅಧಿಕಾರಿಗಳಿಗೆ ಎಚ್ಚರಿಕೆನೀಡಿದ್ದಾರೆ.
ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ತಾಲೂಕಿನಾದ್ಯಂತ ಗುಟ್ಕಾ ಮಾರಾಟ, ಜೂಜಾಟ, ಮರಳುಗಾರಿಕೆ, ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದರೂ ಸಹ ಅಧಿಕಾರಿಗಳು ಏನೂ ಕ್ರಮಕೈಗೊಂಡಿಲ್ಲ. ಅಕ್ರಮ ಮದ್ಯ ಮಾರಾಟದಿಂದಾಗಿ ಗ್ರಾಮೀಣ ಜನತೆ ತತ್ತರಿಸಿ ಹೋಗಿದ್ದಾರೆ, ಪಟ್ಟಣದಲ್ಲಿರುವ ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಆವರಣವನ್ನು ತಾಲೂಕಿನ ಕೆಲ ಗುತ್ತಿಗೆದಾರರು ವಾಹನ ನಿಲ್ಲಿಸುವ ತಾಣವನ್ನಾಗಿಸಿಕೊಂಡಿದ್ದಾರೆ. ಅಲ್ಲದೆ, ಇಲ್ಲಿನ ಸರ್ಕಾರಿ ನಿವಾಸಗಳಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಸರ್ಕಾರಿ ಮನೆಗಳಲ್ಲಿ ವಾಸವಾಗಿದ್ದಾರೆ.
ಇದೆಲ್ಲವೂ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನವಾಗಿರುವುದನ್ನು ನೋಡಿದರೆ ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಈ  ಅಕ್ರಮಗಳನ್ನು ತಡೆಗಟ್ಟಲು ತಾಲೂಕು ಮಟ್ಟದ ಅಧಿಕಾರಿಗಳು ವಿಫಲರಾದರೆ ರಾಜ್ಯದ ಗೃಹ, ಅಬಕಾರಿ, ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಪತ್ರ ಬರೆಯಲಾಗುವುದು. ಇದಕ್ಕೂ ಕ್ರಮಕೈಗೊಳ್ಳದೆ ಹೋದರೆ ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ಸಾರ್ವಜನಿಕರೊಂದಿಗೆ ತಾಲೂಕು ಕಚೇರಿ ಎದುರು ಪ್ರತಿಭಟಿಸಲಾಗುವುದು.
ಸರ್ಕಾರ ಹಣ ಬಿಡುಗಡೆ ಮಾಡಿದೆ: ರಾಷ್ಟ್ರೀಯ ಕೌಟುಂಬಿಕ ಯೋಜನೆಯ ಫಲಾನುಭವಿಗಳಿಗೆ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಚೆಕ್ಗಳ ವಿತರಣೆಯನ್ನು ತಾವು ಮಂಜೂರು ಮಾಡಿಸಿರುವುದಾಗಿ ಶಾಸಕರು ಹೇಳಿದ್ದಾರೆ.
ನಾನು ಶಾಸಕನಾಗಿದ್ದಾಗ ಈ ಎಲ್ಲ ಫಲಾನುಭವಿಗಳಿಗೆ ಮಂಜೂರಾತಿ ಕೊಡಿಸಿರುವುದಾಗಿ ತಿಳಿಸಿದರು. ಅಂದಿನ ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿರಲಿಲ್ಲ. ಬಿಜೆಪಿ ಆಂತರಿಕ ಜಗಳದಲ್ಲಿ ಮಗ್ನವಾಗಿ ಸರ್ಕಾರ ದಿವಾಳಿ ಎದ್ದಿತ್ತು. ಆದರೆ, ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಶಿವನಗೌಡ, ಎಸ್. ಕರಿಯಣ್ಣನವರ, ಪಪಂ ಸದಸ್ಯರಾದ ಮಹ್ಮದ್ ಹುಸೇನ ವಡ್ಡಿನಕಟ್ಟಿ, ರಮೇಶ ತೋರಣಗಟ್ಟಿ, ರಜೀಯಾ ಅಸಾದಿ, ಮುಖಂಡರಾದ ದೊಡ್ಡಗೌಡ ಪಾಟೀಲ, ನ್ಯಾಯವಾದಿ ಬಿ. ಎನ್. ಬಣಕಾರ, ವೀರಬಸಪ್ಪ ಮತ್ತೂರ, ವಿ. ವಿ. ಹಿತ್ತಲಮನಿ, ರಾಜು ಕಮಡೊಳ್ಳಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement