ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಾಸಕರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿ

Vishwanath S
Updated On : 19 Jun 2013, 11:46 am

ಹಾವೇರಿ: ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಉತ್ತಮ ಬದುಕು ಸಾಗಿಸುವಂತಾಗಬೇಕು. ಇದು ಸರ್ಕಾರದ ಉದ್ದೇಶ. ಆದ್ದರಿಂದ ಶಾಸಕರುಗಳಿಗೆ ಗೌರವ ನೀಡುವ ಮೂಲಕ ನಿಮ್ಮ ಕರ್ತವ್ಯವನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿರಿ. ಇಲ್ಲದಿದ್ದರೆ ಮುಂದೇನು ಮಾಡಬೇಕು ಎಂಬುದು ನನಗೆ ಗೊತ್ತಿದೆ.
ಹೀಗೆಂದು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದವರು ಸಣ್ಣ ಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಕಾಶ ಹುಕ್ಕೇರಿ.
ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಭೆಯುದ್ದಕ್ಕೂ ವಿವಿಧ ಇಲಾಖೆಯಲ್ಲಿ ನಡೆದಿರುವ ಕಾರ್ಯಕ್ರಮಗಳ ಕುರಿತಂತೆ ವಿಸ್ತೃತವಾಗಿ ಮಾಹಿತಿ ಪಡೆದರಲ್ಲದೆ, ಆಗಾಗ ಅಧಿಕಾರಿಗಳಿಗೂ ಮಾತಿನ ಛಾಟಿಯೂ ಬಿಸಿದ್ದು ತಂಪ್ಪಿನ ವಾತಾವರಣದಲ್ಲಿಯೂ ಅಧಿಕಾರಿಗಳ ಮೈ ಕಾವು ಹೆಚ್ಚಿಸಿತ್ತು. ಆರೋಗ್ಯ ಇಲಾಖೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಕುಡಿವ ನೀರು, ಕೃಷಿ ಮತ್ತಿತರ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಚರ್ಚಿಸಿದ ಸಚಿವರು, ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದು ಬಾಯಿ ಮಾತಿನಲ್ಲಿ ಕೊಚ್ಚಿಕೊಳ್ಳುತ್ತಿದ್ದ ಅಧಿಕಾರಿಗಳಿಗೆ ಅಂಕಿ-ಸಂಖ್ಯೆಯೊಂದಿಗೆ ಮಾಹಿತಿ ನೀಡುವಂತೆ ಪಟ್ಟು ಹಿಡಿದಿದ್ದು, ಅಧಿಕಾರಿಗಳನ್ನು ಬೆಚ್ಚಿಬೀಳುವಂತೆ ಮಾಡಿತು.
ಅಂಕಿ-ಅಂಶದೊಂದಿಗೆ: ಯಾವ ಯೋಜನೆಯಡಿ ಎಷ್ಟು ಅನುದಾನ ಲಭ್ಯವಾಗಿದೆ. ಆ ಪೈಕಿ ಎಷ್ಟು ಹಣ ವ್ಯಯಿಸಲಾಗಿದೆ. ಎಷ್ಟು ಕಾರ್ಯ ಇನ್ನೂ ಆಗಬೇಕಿದೆ. ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಕಾರಣವೇನು ಇನ್ನಿತರ ಎಲ್ಲ ವಿವರಗಳನ್ನು ಅಂಕಿ-ಅಂಶಗಳೊಂದಿಗೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಕೆಡಿಪಿ ಸಭೆಗಳಲ್ಲಿ ಹಾಜರುಪಡಿಸುವಂತೆ ಸಚಿವ ಹುಕ್ಕೇರಿ ಎಚ್ಚರಿಸಿದರು.
ವಿಶೇಷ ಕಾಳಜಿ: ಜಿಲ್ಲೆಯಲ್ಲಿ ಹರಡಿರುವ ಡೆಂಘೀ ಜ್ವರ ನಿಯಂತ್ರಣಕ್ಕೆ ವಿಶೇಷ ಕಾಳಜಿ ವಹಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ ಅವರು, ಈ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಆರೋಗ್ಯಾಧಿಕಾರಿಗಳು ನೈಜ ವರದಿಯನ್ನು ಅಂಕಿ-ಸಂಖ್ಯೆಗಳೊಂದಿಗೆ ಒಪ್ಪಿಸುವಂತೆ ಸೂಚಿಸಿದರು. ಇಂತಹ ಕಾಯಿಲೆಯಿಂದ ಬಳಲುತ್ತಿರುವ ರೋಗಿಯನ್ನು ಅವರುಗಳ ಸಂಬಂಧಿಕರೇ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ-ಬೆಳಗಾವಿಗೆ ಕೊಂಡ್ಯೊಯುವಂತೆ ಕಾಯದೆ ವೈದ್ಯರೇ ಅವರನ್ನು ಆಯಾ ಆಸ್ಪತ್ರೆಗಳಿಗೆ ಸಾಗಿಸುವ ಕೆಲಸ ಮಾಡಬೇಕೆಂದು ಆದೇಶಿಸಿದರು.
ಪ್ರಸ್ತಾವನೆ ಸಲ್ಲಿಸಿ: ಜಿಲ್ಲೆಯಲ್ಲಿ 2 ಹೊಸ ಟ್ರಾನ್ಸ್ಫಾರ್ಮರ್ಗಳ ದುರಸ್ತಿ ಘಟಕಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು. ಈಗಾಗಲೇ ಜಿಲ್ಲೆಯಲ್ಲಿ 2 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತವೆ. ಇದರಿಂದಾಗಿ ಸಕಾಲಕ್ಕೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಅನಾನುಕೂಲತೆ ನೀಗಸಲು ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿ ಪಡೆಸುವ ಎರಡು ಹೊಸ ಘಟಕಗಳನ್ನು ಆರಂಭಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕಾಮಗಾರಿ ಸೂಕ್ತವಾಗಿರಲಿ: ಜಿಲ್ಲೆಯ ಆಯಾ ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆಯಲು ತಾವು ಖುದ್ದಾಗಿ ರಹಸ್ಯ ರೀತಿಯಲ್ಲಿ ಆಯಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.  ತಪ್ಪಿತಸ್ಥ ಅಧಿಕಾರಿಯ ಗ್ರಹಗತಿಯನ್ನೇ ಬದಲಾಯಿಸುತ್ತೇವೆ ಎಂದೂ ಸೂಚ್ಯವಾಗಿ ಎಚ್ಚರಿಸಿದರು.
ಶಾಸಕರಾದ ಕೆ.ಬಿ. ಕೋಳಿವಾಡ, ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ, ಬಸವರಾಜ ಶಿವಣ್ಣವರ, ಯು.ಬಿ. ಬಣಕಾರ, ಸೋಮಣ್ಣ ಬೇವಿನಮರದ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಪಂ ಸಿಇಓ ಉಮೇಶ ಕುಸುಗಲ್, ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement